ಭೀಮಣ್ಣ ಖಂಡ್ರೆ ನಿಧನಕ್ಕೆ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸಂತಾಪ

ಬೆಂಗಳೂರು/ಬೀದರ್: ಮಾಜಿ ಸಚಿವರು, ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷರಾಗಿದ್ದ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಂತಾಪ ಸಂದೇಶದಲ್ಲಿ,
“ಮಾಜಿ ಸಚಿವರು ಹಾಗೂ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷರಾಗಿದ್ದ ಶತಾಯುಷಿ ಶ್ರೀ ಭೀಮಣ್ಣ ಖಂಡ್ರೆ ಅವರ ನಿಧನ ವಾರ್ತೆ ಕೇಳಿ ನನಗೆ ಬಹಳ ದುಃಖವಾಗಿದೆ. ಸರಳತೆ, ಸಜ್ಜನಿಕೆ ಹಾಗೂ ನೇರ ನಡೆನುಡಿಯ ಮೂಲಕ ಜನಮನ ಗೆದ್ದಿದ್ದ ಅವರು ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಧೀಮಂತ ನಾಯಕರು. ಬೀದರ್ ಜಿಲ್ಲೆ ಕರ್ನಾಟಕದ ಭಾಗವಾಗಿಯೇ ಉಳಿಯಲು ಅವರು ನಡೆಸಿದ ಹೋರಾಟ ಚಿರಸ್ಮರಣೀಯ. ಅವರ ನಿಧನವು ರಾಜ್ಯಕ್ಕೆ ಬಹುದೊಡ್ಡ ನಷ್ಟವಾಗಿದೆ” ಎಂದು ಹೇಳಿದ್ದಾರೆ.
ಅಗಲಿದ ಹಿರಿಯ ಚೇತನಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಪುತ್ರರಾದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಸೇರಿದಂತೆ ಕುಟುಂಬದ ಸದಸ್ಯರು, ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು,
“ಹಿರಿಯ ನಾಯಕರಾಗಿದ್ದ ಶ್ರೀ ಭೀಮಣ್ಣ ಖಂಡ್ರೆ ಅವರ ನಿಧನದ ಸುದ್ದಿ ತಿಳಿದು ತುಂಬ ದುಃಖವಾಗಿದೆ. ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಆದರ್ಶ ಹಾಗೂ ಹೋರಾಟದ ಬದುಕು ನಡೆಸಿದವರು. ವಿಶೇಷವಾಗಿ ರೈತರು, ದೀನದಲಿತರು ಹಾಗೂ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಅವರು ಮಾಡಿದ ಸೇವೆಗಳು ಸದಾ ನೆನಪಿನಲ್ಲಿರುತ್ತವೆ” ಎಂದು ಸ್ಮರಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಗಟ್ಟಿ ಸಂಘಟನೆಯಾಗಿ ಕಟ್ಟಿಬಳೆಸಿದ ಅವರು ಸಮಾಜಕ್ಕೆ ನ್ಯಾಯ ಒದಗಿಸಲು ಕೊನೆಯ ಉಸಿರು ಇರುವವರೆಗೂ ಹೋರಾಟ ನಡೆಸಿದ ಧೈರ್ಯಶಾಲಿ ನಾಯಕರು. ಅವರ ಅಗಲಿಕೆಯಿಂದ ಕರ್ನಾಟಕವೇ ಬಡವಾಗಿದೆ; ವೀರಶೈವ ಮಹಾಸಭೆಯಿಗೂ ಅಪಾರ ನಷ್ಟವಾಗಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
“ನಮ್ಮ ತಂದೆಯವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ನಾಯಕರು ಅಗಲಿರುವುದು ವೈಯಕ್ತಿಕವಾಗಿ ನನಗೂ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಬಸವರಾಜ ಬೊಮ್ಮಾಯಿ ಪ್ರಾರ್ಥಿಸಿದ್ದಾರೆ.







