ಶಾಲಾ-ಕಾಲೇಜುಗಳಲ್ಲಿ ಪತ್ರಿಕೆ ಓದು ಕಡ್ಡಾಯಗೊಳಿಸಲು ಸೂಕ್ತ ಕ್ರಮ : ಕೆ.ವಿ.ಪ್ರಭಾಕರ್

ಬೆಂಗಳೂರು : ಶಾಲಾ ಕಾಲೇಜುಗಳಲ್ಲಿ ಪತ್ರಿಕೆಗಳ ಪ್ರಮುಖ ಸುದ್ದಿಗಳನ್ನು ಓದುವುದು ಮತ್ತು ನೋಟೀಸ್ ಬೋರ್ಡ್‍ನಲ್ಲಿ ಹಾಕುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಸರಕಾರದಿಂದ ಆದೇಶ ಹೊರಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.
ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಎಚ್.ಬಿ.ಮದನಗೌಡ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಈ ಹಿಂದೆ ಶಾಲಾ ಕಾಲೇಜಿನಲ್ಲಿ ಪತ್ರಿಕೆಗಳನ್ನು ಓದುವ ಅಭ್ಯಾಸ ಇದ್ದಂತೆ ಈಗಲೂ ಮುಂದುವರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಮಾಡಲಾಗುವುದು ಎಂದರು.
ಉತ್ತರ ಪ್ರದೇಶ ಸರಕಾರವು, ಆ ರಾಜ್ಯದ ಸರಕಾರಿ ಶಾಲೆಗಳಲ್ಲಿ ಪತ್ರಿಕೆ ಓದಿಸುವ ಮತ್ತು ನೋಟೀಸ್ ಬೋರ್ಡ್‍ನಲ್ಲಿ ಹಾಕುವುದನ್ನು ಕಡ್ಡಾಯ ಮಾಡಿರುವಂತೆ ರಾಜ್ಯದಲ್ಲಿಯೂ ಮಾಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮನವಿ ಮಾಡಿತ್ತು. ಪಠ್ಯ ಪುಸ್ತಕದಲ್ಲಿ ಪತ್ರಿಕೆಗಳ ವಿಷಯವನ್ನು ಸೇರಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಜ್ಞಾನದ ಹಸಿವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಈ ಬಗ್ಗೆ ತಜ್ಞರ ಜೊತೆಗೆ ಅಧ್ಯಯನ ಮಾಡಿ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿಲಾಗಿದೆ.







