ಪ್ರಗತಿಪರರು ವಿಘಟಿತರಾಗಿದ್ದೇವೆ, ಜನವಿರೋಧಿಗಳು ಒಗ್ಗಟ್ಟಿನಿಂದ ಇದ್ದಾರೆ : ಎಲ್.ಹನುಮಂತಯ್ಯ

ಬೆಂಗಳೂರು : ಪ್ರಗತಿಪರ ಚಿಂತನೆ ಇರುವ ಎಲ್ಲರೂ ವಿಘಟಿತರಾಗಿದ್ದೇವೆ. ಪುರೋಗಾಮಿ, ಜನ ವಿರೋಧಿ ಚಿಂತನೆ ಇರುವವರು ಅತ್ಯಂತ ಒಗ್ಗಟ್ಟಿನಿಂದ ದೇಶವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದರು.
ಮಂಗಳವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಆಯೋಜಿಸಿದ್ದ ‘ಸಿಪಿಐ ಶತಮಾನೋತ್ಸವ ಸಮಾರೋಪ ಸಮಾರಂಭ’ದಲ್ಲಿ ಮಾತನಾಡಿದ ಅವರು, ಎಲ್ಲ ಕಮ್ಯುನಿಷ್ಟ್ ಪಕ್ಷಗಳು ಒಗ್ಗೂಡಿ ಒಂದು ಪಕ್ಷವನ್ನಾಗಿ ಮಾಡದೇ ಇದ್ದರೆ, ದೇಶಕ್ಕೆ ಬಹಳ ದೊಡ್ಡ ಭವಿಷ್ಯ ಇದೆ ಅಂತ ಅನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್, ಕಮ್ಯುನಿಸ್ಟ್, ದಲಿತ, ರೈತ ಚಳವಳಿ ಹಾಗೂ ಎಲ್ಲ ಪ್ರಾದೇಶಿಕ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಗ್ಗೂಡಬೇಕು. ಸ್ವಾತಂತ್ರ್ಯ ಚಳವಳಿಯ ಅಂತರ್ಗಂಗೆಯ ರೀತಿಯಲ್ಲಿ ಕಮ್ಯುನಿಸ್ಟರು ಕೆಲಸ ಮಾಡಿರುವುದು ಇತಿಹಾಸದಲ್ಲಿ ದಾಖಲಾಗಿದೆ. ದೇಶವನ್ನು ಸಮತಾ ರಾಜ್ಯವನ್ನಾಗಿ ಕಟ್ಟುವ ಕಲ್ಪನೆಯೊಂದಿಗೆ ಹುಟ್ಟಿರುವುದು ಕಮ್ಯುನಿಸ್ಟ್ ಪಕ್ಷ. ಕಮ್ಯುನಿಷ್ಟ್ ಚಳವಳಿ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಕೆಲಸ ಮಾಡಿದೆ. ಅದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಅವರು ತಿಳಿಸಿದರು.
ಶೂದ್ರರೂ, ದಲಿತರಿಗೆ ಸ್ವಾತಂತ್ರ್ಯ ಬಂದ ಮೇಲೆ ಅಕ್ಷರ ಜ್ಞಾನ ಸಿಕ್ಕಿದೆ. ಅಕ್ಷರ ನಿಜವಾಗಿಯೂ ನಮ್ಮ ಬಿಡುಗಡೆಯ ಅಸ್ತ್ರ. ಅಕ್ಷರ ದೇವನೆ ನಮ್ಮನ್ನು ಮನುಷ್ಯರನ್ನಾಗಿ ಮಾಡಿದವನು. ಉಳಿದ ಯಾವ ದೇವರೂ ಮನುಷ್ಯನಾಗಿ ಮಾಡಿಲ್ಲ. ದೇವಸ್ಥಾನಗಳಿಗೆ ಸುರಿದಿರುವ ಹಣವನ್ನು, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿದ್ದರೆ, ಹಳ್ಳಿಗಳಲ್ಲಿನ ಎಲ್ಲ ಶಾಲೆಗಳು ಹವಾನಿಯಂತ್ರಣದ ಕೊಠಡಿಯಲ್ಲಿ ನಡೆಯುತ್ತಿದ್ದವು ಎಂದು ಹನುಮಂತಯ್ಯ ಹೇಳಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ ಮಾತನಾಡಿ, ಆರೆಸ್ಸೆಸ್ ಡಿಜಿಟಲ್ ಮಾಧ್ಯಮ ಬಳಸಿಕೊಂಡು ಜನರಿಗೆ ತನ್ನ ವಿಚಾರಗಳನ್ನು ತಿಳಿಸುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಕಾಂಗ್ರೆಸ್ ಕೇವಲ ಗ್ಯಾರಂಟಿ ಯೋಜನೆಗಳಲ್ಲಿ ತೇಲುತ್ತಿದೆ ಎಂದು ತಿಳಿಸಿದರು.
ಹಿಂದೆ ಬಿಜೆಪಿ ಸರಕಾರ ರಾಜ್ಯದಲ್ಲಿ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ 2020ಕ್ಕೆ ತಿದ್ದುಪಡಿ ತರಲು ಇದುವರೆಗೂ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಆಗಿಲ್ಲ. ಭೂಸ್ವಾಧೀನ ಕಾಯ್ದೆಯ ಮೂಲಕ ಜನರನ್ನು ಭಯಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಪ್ರಕಾಶ್ ಬಾಬು ಮಾತನಾಡಿ, ಬಿಜೆಪಿ ಆಸ್ತಿ 7 ಸಾವಿರ ಕೋಟಿ ರೂ.ದಷ್ಟಿದ್ದು, ಶ್ರೀಮಂತ ಪಕ್ಷವಾಗಿದೆ. ಬ್ರಿಟೀಷರು ಭಾರತದ ಸಂಪತ್ತು ಲೂಟಿ ಮಾಡಿದರೆಂದು ಹೇಳುತ್ತೇವೆ. ಆದರೆ ಈಗ ಬಿಜೆಪಿ ಅಧಿಕಾರವನ್ನು ಬಳಸಿ ಲೂಟಿ ಮಾಡುತ್ತಿದೆ ಎಂದು ಹೇಳಿದರು.
ಬಡ ಜನರಿಗೆ ಉದ್ಯೋಗ ಒದಗಿಸಿ, ಕೊಳ್ಳುವ ಶಕ್ತಿ ಹೆಚ್ಚಿಸಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹೆಸರು ಮತ್ತು ನಿಯಮಗಳನ್ನು ಬದಲಿಸಿ, ರಾಜ್ಯ ಸರಕಾರಗಳಿಗೆ ನೀಡುವ ಅನುದಾನವನ್ನು ಕೂಡ ಕಡಿಮೆಗೊಳಿಸಿ, ನರೇಗಾ ಯೋಜನೆಯ ಆಶಯವನ್ನು ಹಾಳು ಮಾಡಿದೆ ಎಂದು ಅವರು ಕಿಡಿಗಾರಿದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಡಾ.ಸಿದ್ದನಗೌಡ ಪಾಟೀಲ್, ಸಿಪಿಐ ಮುಖಂಡ ದೀಪಕ್ ಎಂ, ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಮುಖಂಡ ಪಿ.ವಿ.ಲೋಕೇಶ್, ಎಸ್‍ಯುಸಿಐ ರಾಜ್ಯ ಕಾರ್ಯದರ್ಶಿ ಉಮಾ, ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಕ್ಲಿಪ್ಟನ್ ಡಿ. ರೊಝಾರಿಯೋ ಮತ್ತಿತರರು ಉಪಸ್ಥಿತರಿದ್ದರು.







