ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿ

ಮೈಸೂರು/ಹುಣಸೂರು : ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.
ಎಚ್.ಡಿ ಕೋಟೆ ತಾಲೂಕು ಸರ್ವೇ ನಂಬರ್ 17/26 ರ 4 ಎಕರೆ 20 ಗುಂಟೆ ಭೂಮಿಗೆ ಸಂಬಂಧಿಸಿದಂತೆ ಡಾ.ರೂಪಾ ಎಂಬವರಿಗೆ ಖಾತೆ ಮಾಡಿ ಕೊಡಲು 10 ಲಕ್ಷದ 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ. ಕಾವ್ಯರಾಣಿ ಮೊದಲನೇ ಕಂತಾಗಿ 5 ಲಕ್ಷ ರೂ. ಲಂಚ ಪಡೆದಿದ್ದು, ಎರಡನೇ ಕಂತಿನ ಹಣವನ್ನು ಪಡೆಯಲು ತಮ್ಮ ನಿವಾಸಕ್ಕೆ ಬರಮಾಡಿಕೊಂಡು ಮನೆಯಲ್ಲಿ ಲಂಚದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ವೇಳೆ ಅವರ ಆಪ್ತ ಸಹಾಯಕ ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರು ಲೋಕಾಯುಕ್ತ ಡಿ.ವೈ.ಎಸ್ಪಿ ಶೈಲೇಂದ್ರ, ಮಡಿಕೇರಿ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಸದ್ಯಕ್ಕೆ ಲೋಕಾಯುಕ್ತ ಪೋಲೀಸರು ಕಾವ್ಯರಾಣಿ ಅವರನ್ನು ತಮ್ಮ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಾಳಿಯ ಕುರಿತು ಮಾಹಿತಿ ನೀಡಿರುವ ಲೋಕಾಯುಕ್ತ ಎಸ್ಪಿ ಉದೇಶ್, ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯರಾಣಿ ಹಾಗೂ ಆಪ್ತ ಸಹಾಯಕ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಲಂಚದ ಹಣವನ್ನು ಜಪ್ತಿ ಮಾಡಲಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.






