Bengaluru | ಮಡಿವಾಳದಲ್ಲಿ ದರೋಡೆ ಪ್ರಕರಣ: ಸಿಐಡಿ ಇನ್ಸ್ ಪೆಕ್ಟರ್ ಸೇರಿ ಮೂವರ ಬಂಧನ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಮಡಿವಾಳದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ(ಸಿಐಡಿ) ಇನ್ಸ್ ಪೆಕ್ಟರ್ ಮಹೇಶ್ ಕನಕಗಿರಿ ಸೇರಿ ಮೂವರು ಆರೋಪಿಗಳನ್ನು ಬೆಂಗಳೂರು ನಗರ ಆಗ್ನೇಯ ವಿಭಾಗದ ಮಡಿವಾಳ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ವ್ಯಾಪಾರ ಉದ್ದೇಶಗಳಿಗಾಗಿ ಹಣವನ್ನು ತಂದಿದ್ದ ಕೇರಳದ ಉದ್ಯಮಿಗಳು ಮಡಿವಾಳದ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಅವರು, ಕುಪೇಂದ್ರರೆಡ್ಡಿ, ವಸಂತ್ಕುಮಾರ್ ಎಂಬವರ ಜೊತೆಗೂಡಿ ದರೋಡೆಗೆ ಯೋಜನೆ ರೂಪಿಸಿದ್ದರು.
ಯೋಜನೆಯಂತೆ ಹೋಟೆಲ್ ಕೋಣೆಗೆ ನುಗ್ಗಿದ ಆರೋಪಿಗಳು ತಾವು ಪೊಲೀಸರೆಂದು ಇನ್ಸ್ ಪೆಕ್ಟರ್ ಅವರ ಅಧಿಕೃತ ಗುರುತಿನ ಚೀಟಿ ತೋರಿಸಿ, ಉದ್ಯಮಿಗಳನ್ನು ಬೆದರಿಸಿ, ಅವರಿಂದ 20 ಲಕ್ಷ ರೂ. ನಗದನ್ನು ಕಸಿದುಕೊಂಡಿದ್ದರು.
ಹಣ ಕಳೆದುಕೊಂಡ ಯುವಕರು ಜೂ.19ರಂದು ಬೆಳಗಿನ ಜಾವ ಮಡಿವಾಳ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾದ ಕೆಲವು ಗಂಟೆಗಳಲ್ಲೇ ಪೊಲೀಸರು ಕುಪೇಂದ್ರರೆಡ್ಡಿಯನ್ನು ಬಂಧಿಸಿದ್ದರು. ವಿಷಯ ತಿಳಿದ ಇನ್ಸ್ ಪೆಕ್ಟರ್ ಮಹೇಶ್ ಕನಕಗಿರಿ ಪಾರಾರಿಯಾಗಿದ್ದರು. ಆದರೆ ನಿಖರ ಮಾಹಿತಿಯನ್ನು ಆಧಾರಿಸಿ ಪೊಲೀಸರು ಆರೋಪಿಗಳಾದ ಮಹೇಶ್ ಕನಕಗಿರಿ ಮತ್ತು ವಸಂತ್ಕುಮಾರ್ ಅವರನ್ನು ಜೂ.19ರ ತಡರಾತ್ರಿ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.






