ಮಲ್ಲಿಕಾರ್ಜುನ ಖರ್ಗೆ ಆರೆಸ್ಸೆಸ್ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿದ್ದು, ಎಚ್ಚರಿಕೆ ನೀಡಲು: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಅಂದು(2002) ರಾಜ್ಯ ಗೃಹಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಆರೆಸ್ಸೆಸ್ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿದ್ದು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ನಿಮ್ಮ ಜನರಿಗೆ ಎಚ್ಚರಿಕೆ ನೀಡಲು. ಬಿಜೆಪಿಗರಿಗೆ ನೆನಪಿಲ್ಲದಿದ್ದಲ್ಲಿ ಅದನ್ನು ನೆನಪಿಸಲು ಬಯಸುತ್ತೇನೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ರಾಜ್ಯ ಬಿಜೆಪಿಯು ತನ್ನ ಎಕ್ಸ್ ಖಾತೆಯಲ್ಲಿ ಮಲ್ಲಿಕಾರ್ಜುನ ಖರ್ಗೆ 2002ರಲ್ಲಿ ಆರೆಸ್ಸೆಸ್ ಶಿಬಿರಕ್ಕೆ ಭೇಟಿ ನೀಡಿದ್ದರು ಎಂದು ಹಳೆಯ ಫೋಟೋದೊಂದಿಗೆ ಪೋಸ್ಟ್ ವೊಂದನ್ನು ಹಾಕಿತ್ತು. ಇದಕ್ಕೆ ಪ್ರಿಯಾಂಕ್ ಖರ್ಗೆ 'ಎಕ್ಸ್' ಪೋಸ್ಟ್ ಮೂಲಕವೇ ತಿರುಗೇಟು ನೀಡಿದ್ದಾರೆ.
ಆರೆಸ್ಸೆಸ್ ಕಾರ್ಯಕ್ರಮ ಸ್ಥಳಕ್ಕೆ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ ವೇಳೆ ಅವರು ರಾಜ್ಯ ಗೃಹ ಸಚಿವರಾಗಿದ್ದರು. ಅಂದು ಅವರು ತನ್ನ ಅಧ್ಯಕ್ಷತೆಯಲ್ಲಿ ಎಲ್ಲ ಸಮುದಾಯಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳೊಂದಿಗೆ ಶಾಂತಿ ಸಮಿತಿ ನಡೆಸಿದ ಬಳಿಕ ಆರೆಸ್ಸೆಸ್ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿದ್ದರು. ಅದು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ನಿಮ್ಮ ಜನರಿಗೆ ಎಚ್ಚರಿಕೆ ನೀಡಲು ನೀಡಿದ ಭೇಟಿಯಾಗಿತ್ತು ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ಸರಿಯಾಗಿ ಗಮನಿಸಿ, ಅವರು ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಾಂಗ್ಲಿಯಾನ ಅವರೊಂದಿಗೆ ಅಲ್ಲಿಗೆ ಆಗಮಿಸಿದ್ದರು. ನೀವು ಸರಿಯಾಗಿ ನೆನಪಿಸಿಕೊಂಡರೆ, "ಒಂದೋ ದೇಶದ ಕಾನೂನಿಗೆ ಬದ್ಧರಾಗಿರಿ ಅಥವಾ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ" ಎಂದು ಮಲ್ಲಿಕಾರ್ಜುನ ಖರ್ಗೆ ಅಂದು ನಿಮ್ಮನ್ನು ಎಚ್ಚರಿಸಿದ್ದರು ಎಂದು ಬಿಜೆಪಿಗರನ್ನು ಉದ್ದೇಶಿಸಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.







