ಬೆಂಗಳೂರು | ವಿಶೇಷಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಗೆ ಥಳಿಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಶೇಷಚೇತನ ಯವತಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಸ್ಥಳೀಯರೇ ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ನ.9ರಂದು ಆಡುಗೋಡಿ ಠಾಣಾ ವ್ಯಾಪ್ತಿಯ ಎಂ.ಆರ್.ನಗರದಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯ ಮಾಹಿತಿಯನ್ವಯ ಆರೋಪಿ ವಿಘ್ನೇಶ್ ಯಾನೆ ದಾಡು ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾತು ಬಾರದ, ಕಾಲು ಸ್ವಾಧೀನವಿರದ 21 ವರ್ಷ ವಯಸ್ಸಿನ ಯುವತಿಯನ್ನು ಮನೆಯಲ್ಲಿ ಬಿಟ್ಟು, ಹೊರಗಿನಿಂದ ಬಾಗಿಲ ಚಿಲಕ ಹಾಕಿಕೊಂಡು ಆಕೆಯ ಪೋಷಕರು ಸಮೀಪದಲ್ಲೇ ಇದ್ದ ಮದುವೆ ಸಮಾರಂಭವೊಂದಕ್ಕೆ ನ.9ರಂದು ತೆರಳಿದ್ದರು. ಬೆಳಗ್ಗೆ 11ಗಂಟೆ ಸುಮಾರಿಗೆ ಗಾಂಜಾ ನಶೆಯಲ್ಲಿ ಮನೆ ಬಳಿ ಬಂದಿದ್ದ ಆರೋಪಿ ವಿಘ್ನೇಶ್, ಬಾಗಿಲ ಚಿಲಕ ತೆಗೆದು ಒಳಗೆ ನುಗ್ಗಿದ್ದ ಎನ್ನಲಾಗಿದೆ.
ಕೆಲ ಹೊತ್ತಿನ ಬಳಿಕ ಮಗಳನ್ನು ನೋಡಿಕೊಂಡು ಹೋಗೋಣವೆಂದು ಆಕೆಯ ತಾಯಿ ಮನೆಗೆ ಬಂದಾಗ ಒಳಗಿನಿಂದ ಬಾಗಿಲ ಚಿಲಕ ಹಾಕಲಾಗಿತ್ತು. ಆತಂಕಗೊಂಡ ಯುವತಿಯ ತಾಯಿ ಕಾಲಿನಿಂದ ಒದ್ದು ಬಾಗಿಲು ತೆರೆದು ನೋಡಿದಾಗ ಆರೋಪಿಯ ಹೀನಕೃತ್ಯ ಬಯಲಾಗಿತ್ತು. ಯುವತಿಯ ತಾಯಿಯನ್ನು ಕಂಡ ಕೂಡಲೇ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಸ್ಥಳಿಯರೇ ಹಿಡಿದು ಥಳಿಸಿದ್ದಾರೆ.
ಬಳಿಕ ಸ್ಥಳೀಯರಿಂದ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ್ದ ಆಡುಗೋಡಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವುದಾಗಿ ತಿಳಿಸಿದ್ದಾರೆ.







