ಮೂರು ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಅನುಮೋದನೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಎಲಿವೇಟೆಡ್ ವಿಭಾಗದಲ್ಲಿರುವ ಮೂರು ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ.
ಸಾರ್ವಜನಿಕ ಮನವಿಗಳನ್ನು ಪರಿಶೀಲಿಸಿ ಇತ್ತೀಚೆಗೆ ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆಯು ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಇದೀಗ ಸ್ಪಂದಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ನಿಲ್ದಾಣಗಳ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
ನವೆಂಬರ್ 11ರಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿಯವರು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ನಿಲ್ದಾಣಗಳ ಹೆಸರು ಬದಲಾವಣೆಯ ಪ್ರಸ್ತಾವವನ್ನು ಸಚಿವಾಲಯದ ಸಮರ್ಥ ಪ್ರಾಧಿಕಾರ ಅನುಮೋದಿಸಿದೆ. ಸೂಕ್ತ ಸಮಯದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.
ಸದ್ಯ, ಐಐಎಂಬಿ ಮೆಟ್ರೋ ನಿಲ್ದಾಣ, ಜೆ.ಪಿ.ನಗರ 4ನೇ ಹಂತದ ಮೆಟ್ರೋ ನಿಲ್ದಾಣ, ತಾವರೆಕೆರೆ ಮೆಟ್ರೋ ನಿಲ್ದಾಣ- ಈ ಮೂರು ನಿಲ್ದಾಣಗಳ ಹೆಸರುಗಳನ್ನು ಬದಲಾವಣೆ ಮಾಡಲು ಅನುಮೋದನೆ ದೊರೆತಂತಾಗಿದೆ.




