ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಬದ್ಧ; ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ರುದ್ರಪ್ಪ ಲಮಾಣಿ

ಬೆಂಗಳೂರು : ನೇಕಾರರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಬಲಪಡಿಸುವುದರ ಜೊತೆಗೆ ಅವರ ಉತ್ಪನ್ನಗಳಿಗೆ ಸ್ಥಿರ ಮಾರುಕಟ್ಟೆ ಕಲ್ಪಿಸಲು ಸರಕಾರ ಬದ್ಧ. ಅವರ ಬೇಡಿಕೆಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ಭರವಸೆ ನೀಡಿದರು.
ಗುರುವಾರ ವಿಕಾಸಸೌಧದಲ್ಲಿ ಇಲಾಖೆ ಆಯೋಜಿಸಿದ್ದ ನೇಕಾರರೊಂದಿಗಿನ ಸಂವಾದದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೇಕಾರರು, ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳ ಅಹವಾಲು ಮತ್ತು ಸಲಹೆಗಳನ್ನು ಆಲಿಸಿದರು.
ಸಿಎಂ ನಿರ್ದೇಶನದ ಮೇರೆಗೆ ನೇಕಾರರೊಂದಿಗೆ ನೇರ ಸಂವಾದ ನಡೆಸಲಾಗಿದೆ. ನೇಕಾರರ ಜೀವನೋಪಾಯ, ಸಾಮಾಜಿಕ ಭದ್ರತೆ, ಹಣಕಾಸು ನೆರವು ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ಬೇಡಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಂತ-ಹಂತವಾಗಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸಂವಾದದಲ್ಲಿ ನೇಕಾರಿಕೆ ಉದ್ದೇಶಗಳಿಗೆ ಶೂನ್ಯ ಹಾಗೂ ಶೇ.3ರ ಬಡ್ಡಿದರದಲ್ಲಿ ನೀಡುವ ಸಾಲದ ಮಿತಿಯನ್ನು ಕ್ರಮವಾಗಿ 2 ಲಕ್ಷದಿಂದ 5 ಲಕ್ಷ ರೂ.ಗಳಿಗೆ ಹಾಗೂ 5ಲಕ್ಷದಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸುವುದು, ಶೂನ್ಯ ಬಡ್ಡಿ ದರದ ಕ್ಲೇಮ್‍ಗಳಿಗೆ ಜಿಎಸ್ಟಿ ವಿನಾಯಿತಿ ನೀಡುವುದು ಸೇರಿದಂತೆ ಹಣಕಾಸು ನೆರವಿಗೆ ಸಂಬಂಧಿಸಿದ ಹಲವು ಬೇಡಿಕೆಗಳ ಕುರಿತು ಚರ್ಚಿಸಲಾಯಿತು.
ಜೊತೆಗೆ ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನ, ನೇಕಾರ ಸಮ್ಮಾನ ಯೋಜನೆಯ ನೆರವು ಹೆಚ್ಚಳ, ಕಟ್ಟಡ ಕಾರ್ಮಿಕರಿಗೆ ನೀಡುವ ಮಾದರಿಯಲ್ಲೇ ವೃತ್ತಿಪರ ನೇಕಾರರಿಗೂ ಕಾರ್ಮಿಕ ಕಲ್ಯಾಣ ಸೌಲಭ್ಯಗಳನ್ನು ವಿಸ್ತರಿಸುವುದು, 60ವರ್ಷ ಮೇಲ್ಪಟ್ಟ ನೇಕಾರರಿಗೆ ಮಾಶಾಸನ ಹಾಗೂ ನೇಕಾರರಿಗೆ ನಿವೇಶನ ಒದಗಿಸುವ ಬೇಡಿಕೆಗಳನ್ನು ಪ್ರತಿನಿಧಿಗಳು ಸಚಿವರ ಮುಂದಿಟ್ಟರು.
ರಾಜ್ಯ ಸರಕಾರ ನೀಡುತ್ತಿರುವ 10 ಎಚ್‍ಪಿ ವರೆಗಿನ ವಿದ್ಯುತ್ ಸಬ್ಸಿಡಿ ನೇಕಾರಿಕೆ ಚಟುವಟಿಕೆಗಳಿಗೆ ನೆರವಾಗುತ್ತಿದೆ ಎಂದು ತಿಳಿಸಿದ ಪ್ರತಿನಿಧಿಗಳು, ಹಲವು ವರ್ಷಗಳಿಂದ ಬಾಕಿ ಇರುವ ಸುಮಾರು 9.50 ಕೋಟಿ ರೂ.ವಿದ್ಯುತ್ ಸಬ್ಸಿಡಿ ಸಂಬಂಧಿತ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿದರು. ಪ್ರಮುಖ ನಗರಗಳಲ್ಲಿ ವರ್ಷಪೂರ್ತಿ ಕೈಮಗ್ಗ ಮೇಳಗಳನ್ನು ನಡೆಸಿ ನೇಕಾರರಿಗೆ ನಿರಂತರ ಮಾರುಕಟ್ಟೆ ಕಲ್ಪಿಸುವ ಬೇಡಿಕೆಯನ್ನೂ ಮುಂದಿಟ್ಟರು.
ಬಾಕಿ ವಿದ್ಯುತ್ ಬಿಲ್ ಮತ್ತು ಸಬ್ಸಿಡಿ ವಿಷಯವನ್ನು ಈಗಾಗಲೇ ಸಿಎಂ ಗಮನಕ್ಕೆ ತರಲಾಗಿದೆ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನೇಕಾರರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವುದರ ಜೊತೆಗೆ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸುವುದೂ ಸರಕಾರದ ಆದ್ಯತೆ ಎಂದು ರುದ್ರಪ್ಪ ಲಮಾಣಿ ಹೇಳಿದರು.
ಖರೀದಿಯಲ್ಲಿ ಆದ್ಯತೆ: ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಸರಕಾರಿ ಇಲಾಖೆ ಮತ್ತು ನಿಗಮಗಳಿಗೆ ಅಗತ್ಯವಿರುವ ಸಮವಸ್ತ್ರ ಹಾಗೂ ಇತರೆ ಬಟ್ಟೆಗಳ ಖರೀದಿಯಲ್ಲಿ ಕೆಎಚ್‍ಡಿಸಿ, ಕೆಎಸ್‍ಟಿಐಡಿಸಿಎಲ್ ಮತ್ತು ಕಾವೇರಿ ಹ್ಯಾಂಡ್‍ಲೂಮ್ಸ್‍ಗೆ ಆದ್ಯತೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಹೊಸ ಜವಳಿ ನೀತಿಯಲ್ಲಿ ನೇಕಾರರ ಅಭಿವೃದ್ಧಿ, ಉತ್ಪಾದನೆ, ಮಾರುಕಟ್ಟೆ ಅವಕಾಶ ಮತ್ತು ಉದ್ಯಮ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ರೇಷ್ಮೆ ವಲಯವನ್ನೂ ನೀತಿಯ ವ್ಯಾಪ್ತಿಗೆ ತರಲಾಗಿದೆ ಎಂದು ಅವರು ಹೇಳಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಎ.ಬಿ.ಬಸವರಾಜು; ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್, ಕಾವೇರಿ ಹ್ಯಾಂಡ್‍ಲೂಮ್ಸ್ ಅಧ್ಯಕ್ಷ ಬಿ.ಜೆ.ಗಣೇಶ್, ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ.ಗೌಡ, ಹೆಚ್ಚುವರಿ ನಿರ್ದೇಶಕರಾದ ಸಿ.ಎಸ್.ಯೋಗೇಶ್ ಮತ್ತು ಶ್ರೀಧರ್ ನಾಯಕ್, ಕಾವೇರಿ ಹ್ಯಾಂಡ್‍ಲೂಮ್ಸ್ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ ಎಂ. ಸೇರಿದಂತೆ ಇಲಾಖೆಯ ಅಧಿಕಾರಿಗಳು, ನೇಕಾರರು, ಸಹಕಾರ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.






