Bengaluru | ಸ್ಪೀಕರ್ ಕಚೇರಿ ಮುಂದೆ IPL ಟಿಕೆಟ್ಗಾಗಿ ಶಾಸಕರ ಆಪ್ತ ಸಹಾಯಕರ ದಂಡು!

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಶಾಸಕರಿಗೆ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯದ ಉಚಿತ ಟಿಕೆಟ್ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆಯೂ ಶನಿವಾರ ವಿಧಾನಸೌಧದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಕಚೇರಿ ಮುಂದೆ ಟಿಕೆಟ್ ಪಡೆಯಲು ಶಾಸಕರ ಆಪ್ತ ಸಹಾಯಕರ ದಂಡೇ ಹರಿದು ಬಂದಿದ್ದ ದೃಶ್ಯ ಕಂಡಬಂದಿತು.
ತಲಾ ಓರ್ವ ಶಾಸಕರಿಗೆ 3 ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯದ ಉಚಿತ ಟಿಕೆಟ್ ಮೀಸಲಿಟ್ಟಿರುವ ಕಾರಣ ಇದನ್ನು ಅಧಿಕೃತವಾಗಿ ಪಡೆಯಲು ವಿಧಾನಸೌಧದ ಮೊದಲನೆ ಮಹಡಿಯಲ್ಲಿರುವ ಸ್ಪೀಕರ್ ಯು.ಟಿ.ಖಾದರ್ ಅವರ ಕಚೇರಿ ಮುಂದೆ ಶಾಸಕರ ಆಪ್ತ ಸಹಾಯಕರು ಸಾಲು ಸಾಲಾಗಿ ನಿಂತಿದ್ದರು.
ರವಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಮತ್ತು ಚೆನ್ನೈ ನಡುವೆ ಪಂದ್ಯ ಹಿನ್ನೆಲೆ 118ಕ್ಕೂ ಅಧಿಕ ಶಾಸಕರು ಸ್ಪೀಕರ್ ಕಚೇರಿಯಿಂದ ಅಧಿಕೃತವಾಗಿ ಪಂದ್ಯದ ಉಚಿತ ಟಿಕೆಟ್ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಇನ್ನೊಂದೆಡೆ, ಶಾಸಕರ ಆಪ್ತ ಸಹಾಯಕರು ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಸರಕಾರದ ಕ್ರಮವನ್ನು ಟೀಕಿಸಿದ್ದಾರೆ.
ವಿಧಾನಸಭೆಯಲ್ಲಿ ಐಪಿಎಲ್ ಟಿಕೆಟ್ಗಾಗಿ ಕಾಂಗ್ರೆಸ್ ಶಾಸಕ ವಿಜಯನಾನಂದ ಕಾಶಪ್ಪನವರ್ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿತ್ತು. ಸ್ಪೀಕರ್ ಯು.ಟಿ.ಖಾದರ್ ಕೂಡಾ ಶಾಸಕರ ಮನವಿಗೆ ಸ್ಪಂದಿಸುವಂತೆ ಸೂಚಿಸಿದ್ದರು. ಆದರೆ ವಿಧಾಸಭೆಯಲ್ಲಿ ನಡೆದ ಚರ್ಚೆ ಪರ ಹಾಗೂ ವಿರೋಧ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಸಾರ್ವಜನಿಕ ವಲಯದಲ್ಲಿ ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಶಾಸಕರ ವಿಐಪಿ ಸಂಸ್ಕೃತಿಯ ಬಗ್ಗೆ ಜನರು ವಿರೋಧ ವ್ಯಕ್ತಪಡಿಸಿದ್ದರು.







