ಜನರು ಸಾಹಿತ್ಯ ಅರ್ಥ ಮಾಡಿಕೊಂಡರೆ ಅಪರಾಧಿಗಳಾಗುವುದಿಲ್ಲ: ಮುಕುಂದರಾಜ್

ಬೆಂಗಳೂರು : ಕನ್ನಡ ಸಾಹಿತ್ಯವನ್ನು ಜನರು ಅರ್ಥ ಮಾಡಿಕೊಂಡರೆ ಅಪರಾಧಿಗಳಾಗಲು ಸಾಧ್ಯವಿಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ.
ರವಿವಾರ ನಗರದ ಎನ್‍ಜಿಒ ಸಭಾಂಗಣದಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘ-ಪೋಸ್ಟ್ ಮನ್, ಎಂಟಿಎಸ್ ಕರ್ನಾಟಕ ವೃತ್ತದ ವತಿಯಿಂದ ಆಯೋಜಿಸಿದ್ದ ಡಾ.ಅಮ್ಮಸಂದ್ರ ಸುರೇಶ್ ಬರೆದಿರುವ ‘ಅಂಚೆ ಕಥನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಂಪನಿಗಿಂತ ಹಿಂದೆ ಅನೇಕ ಕವಿಗಳಿದ್ದರು. ಅವರು ಬರೆದ ಕೃತಿಗಳು ನಮಗೆ ಇನ್ನೂ ಸಿಕ್ಕಿಲ್ಲ. ಯಾಕೆಂದರೆ ಪೂರ್ವಜರಿಗೆ ವಿದ್ಯೆಯೇ ಇರಲಿಲ್ಲ. ದೇಶದ ಶೇ.97ರಷ್ಟು ಶ್ರಮಿಕ ವರ್ಗದ ಜನರಿಗೆ ವಿದ್ಯ ಇರಲಿಲ್ಲ. ಒಂದೊಂದು ಜಾತಿ ಮಾಡಿ, ಒಂದೊಂದು ಕೆಲಸವನ್ನು ಹೇರಲಾಯಿತು ಎಂದು ಮುಕುಂದರಾಜ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಅಂಚೆ ವೃತ್ತದ ಅಂಚೆ ಸೇವೆ ನಿರ್ದೇಶಕ ಸಂದೇಶ್ ಮಹದೇವಪ್ಪ, ಲೇಖಕ ಡಾ. ಅಮ್ಮಸಂದ್ರ ಸುರೇಶ್, ಅಖಿಲ ಭಾರತ ಅಂಚೆ ನೌಕರರ ಸಂಘ ಕರ್ನಾಟಕ ವೃತ್ತದ ಅಧ್ಯಕ್ಷ ರವಿ ಬಿ. ಪಾಟೀಲ್, ಖಜಾಂಚಿ ರಾಜೇಶ್ ಭಾಸ್ಕರ್.ಎಲ್, ಮಂಜುನಾಥ ದಂಡಿನಶಿವರ, ಪ್ರಕಾಶಕ ಸಿದ್ದೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.
‘ಡಾ.ಅಮ್ಮಸಂದ್ರ ಸುರೇಶ್ ಅವರು ‘ಅಂಚೆ ಕಥನ’ ಕೃತಿಯ ಮೂಲಕ ಅಂಚೆ ಇಲಾಖೆಯ ಸ್ವರೂಪ ಮತ್ತು ಚರಿತ್ರೆಯನ್ನು ಗ್ರೀಕರ ಕಾಲದಿಂದ ಕಟ್ಟಿಕೊಟ್ಟಿದ್ದಾರೆ. ಅಂಚೆ ಕಥನ ಪುಸ್ತಕ ಈಗಿನ ಅಂಚೆ ಇಲಾಖೆಯ ನೌಕರರಿಗೆ ಒಂದು ಕೈಪಿಡಿಯಾಗಿದೆ’
-ಎಲ್.ಎನ್.ಮುಕುಂದರಾಜ್, ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ






