Bengaluru | ಇಬ್ಬರು ವಿದ್ಯಾರ್ಥಿನಿಯರ ನಿಗೂಢ ನಾಪತ್ತೆ: ಪ್ರಕರಣ ಸಿಐಡಿಗೆ ವರ್ಗಾವಣೆ

ಬೆಂಗಳೂರು: ನಾಲ್ಕು ತಿಂಗಳ ಹಿಂದೆ ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಗೂಢವಾಗಿ ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರ ಸುಳಿವು ಇದುವರೆಗೂ ಪತ್ತೆಯಾಗದ ಹಿನ್ನೆಲೆ, ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾಹಿಸಲಾಗಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ತೇಜಸ್ವಿನಿ ಜ.31ರಂದು ನಿಗೂಢವಾಗಿ ನಾಪತ್ತೆಯಾಗಿದ್ದರು. ಮನೆಯಿಂದ ಆಧಾರ್ ಕಾರ್ಡ್‍ಗಳನ್ನು ಮಾತ್ರ ತೆಗೆದುಕೊಂಡು ಹೊರಟಿದ್ದ ವಿದ್ಯಾರ್ಥಿನಿಯರು ಇದುವರೆಗೂ ವಾಪಸ್ ಬಂದಿಲ್ಲ. ಇದರಿಂದ ಆತಂಕಗೊಂಡ ಪೋಷಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಪೊಲೀಸರ ತನಿಖೆ ವೇಳೆ ಈ ಇಬ್ಬರು ವಿದ್ಯಾರ್ಥಿನಿಯರು ಕೆಲವು ಜಂಕ್ಷನ್ ದಾಟುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪ್ರಾರಂಭದಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಸುಳಿವನ್ನು ಪತ್ತೆಹಚ್ಚಿ ಹುಡುಕಾಟ ನಡೆಸಿದಾಗ ಅಲ್ಲಿ ಸಿಕ್ಕಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಮೈಸೂರು, ಚೆನ್ನೈ, ಕೊಯಮತ್ತೂರು, ಕೇರಳ, ದಿಲ್ಲಿ ಹೀಗೆ ದೇಶದ 100ಕ್ಕೂ ಹೆಚ್ಚು ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಈ ವಿದ್ಯಾರ್ಥಿನಿಯರ ಯಾವುದೇ ಸುಳಿವು ಪತ್ತೆಯಾಗಿಲ್ಲ. ಇವರಿಬ್ಬರು ಯಾವುದೇ ಮೊಬೈಲ್‍ಗಳಾಗಲೀ ಅಥವಾ ಎಟಿಎಂ ಕಾರ್ಡ್‍ಗಳನ್ನು ಬಳಸುತ್ತಿಲ್ಲ. ಅಲ್ಲದೇ ಸ್ನೇಹಿತರಾಗಲಿ, ಸಂಬಂಧಿಕರು, ಕುಟುಂಬ ಸದಸ್ಯರನ್ನು ಸಂಪರ್ಕಿಸದಿರುವುದು ಗೊತ್ತಾಗಿದೆ. ಹಾಗಾಗಿ ಇವರಿಬ್ಬರ ಪತ್ತೆ ಕಾರ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ತಮ್ಮ ಮಕ್ಕಳು ಪತ್ತೆಯಾಗದ ಹಿನ್ನಲೆಯಲ್ಲಿ ಪೋಷಕರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಹಿಸಿದ್ದು, ಸದ್ಯ, ಸಿಐಡಿಯ ವಿಶೇಷ ತಂಡವು ವಿದ್ಯಾರ್ಥಿನಿಯರ ಪತ್ತೆಗೆ ಮುಂದಾಗಿದೆ.






