ಅನಿವಾಸಿ ಕನ್ನಡಿಗರ ‘ಸಚಿವಾಲಯ’ದ ಕನಸು ನನಸಾಗಿದೆ: ಡಾ.ಆರತಿ ಕೃಷ್ಣ

ಬೆಂಗಳೂರು: ಅನಿವಾಸಿ ಕನ್ನಡಿಗರ ‘ಸಚಿವಾಲಯ’ ಸ್ಥಾಪಿಸಬೇಕೆನ್ನುವ ಕನಸು ನನಸಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಅವರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿನ ನಯನ ಸಭಾಂಗಣದಲ್ಲಿ ‘ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ’ಯ ವತಿಯಿಂದ ಆಯೋಜಿಸಿದ್ದ ಜೀವನ್ಮುಖಿ ಪತ್ರಿಕೆಯ 16ನೇ ವರ್ಷದ ವಾರ್ಷಿಕೋತ್ಸವ, ‘ಜೀವನ್ಮುಖಿ’ ಪ್ರಶಸ್ತಿ ಪ್ರದಾನ, ವಿಶೇಷ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ವಿಧಾನ ಪರಿಷತ್ ಸದಸ್ಯೆಯಾದ ಮೇಲೆ ಅನಿವಾಸಿ ಕನ್ನಡಿಗರಿಗೆ ಒಂದು ಧ್ವನಿಯಾದಂತಾಗಿದೆ. ಬೇರೆ ವಿಧಾನ ಪರಿಷತ್ ಸದಸ್ಯರಿಗೆ ಹಾಗೂ ಶಾಸಕರಿಗೆ ಅವರದೇ ಆದ ಕ್ಷೇತ್ರ ಇರುತ್ತದೆ. ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಎರಡು ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತೇನೆ. ಎರಡೂ ಹುದ್ದೆಗಳು ವಿದೇಶಕ್ಕೆ ಸಂಬಂಧಿಸಿರುವಂತಹವು ಎಂದು ಅವರು ಹೇಳಿದರು.
ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆಯಲಿ ಅಥವಾ ಸಮಸ್ಯೆಗಳಾದಾಗ ಅನಿವಾಸಿ ಭಾರತೀಯರನ್ನು ಒಟ್ಟುಗೂಡಿಸಿ ಕೆಲಸ ಮಾಡುವ ಜವಾಬ್ಧಾರಿ ನನ್ನ ಮೇಲಿದೆ. ವಿಧಾನ ಪರಿಷತ್ ಸದಸ್ಯೆಯಾದ ನಂತರ ಕರ್ನಾಟಕದ ಮೇಲೆ ಹೆಚ್ಚು ಜವಾಬ್ಧಾರಿ ಇದೆ. ಅನಿವಾಸಿ ಕನ್ನಡಿಗರಿಗೆ ಪತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನಿವಾಸಿ ಕನ್ನಡಿಗರ ಸಚಿವಾಲಯ ಸ್ಥಾಪನೆಯನ್ನು ಘೋಷಣೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆಯಾಗಿ ಎರಡು ಭಾರಿ ಕೆಲಸ ಮಾಡಿದ್ದೇನೆ. ಅನಿವಾಸಿ ಕನ್ನಡಿಗರಿಗೆ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯದಲ್ಲಿ ಒಂದು ಸಚಿವಾಲಯ ಇರಲಿಲ್ಲ. ನಾನು ಸಚಿವಾಲಯ ಸ್ಥಾಪನೆಯಾದರೆ ನಾನು ಇಲ್ಲದಿದ್ದರೂ ಕೆಲಸಗಳು ನಡೆಯುತ್ತವೆ. ಕೋವಿಡ್‍ನಂತಹ ಸಮಯ, ಯುದ್ಧದ ಸಂದರ್ಭಗಳನ್ನು ಎದುರಿಸಲು ಅನಿವಾಸಿ ಕನ್ನಡಿಗರಿಗೆ ಸಚಿವಾಲಯ ಅಗತ್ಯ ಎಂದು ಡಾ.ಆರತಿ ಕೃಷ್ಣ ಹೇಳಿದರು.
ಗೃಹ ಮಂಡಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಎ.ದಯಾನಂದ ಮಾತನಾಡಿ, ಪ್ರಶಸ್ತಿಗಳನ್ನು ಸ್ವೀಕರಿಸುವುದು ಅಧಿಕಾರಿಗಳಿಗೆ ಮುಜುಗರವಾಗುತ್ತಿರುತ್ತದೆ. ಆದರೂ ಪ್ರಶಸ್ತಿಗಳನ್ನು ಸ್ವೀಕರಿಸುತ್ತೇವೆ. ಅಧಿಕಾರಿಗಳಿಗೆ ಹೆಚ್ಚು ಪ್ರಚಾರ ಸಿಕ್ಕರೆ ಒಂದು ರೀತಿಯ ಸಮಸ್ಯೆ ಎಂದು ಡಾ.ಆರತಿ ಕೃಷ್ಣ ತಿಳಿಸಿದರು.
ಇದೇ ವೇಳೆ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ, ಗೃಹ ಮಂಡಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಎ.ದಯಾನಂದ, ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎನ್.ಯತೀಶ್, ಸಾಹಿತಿ ನಂ.ನಂಜಪ್ಪ ರಾಜಣ್ಣ ಅವರಿಗೆ ‘ಜೀವನ್ಮುಖಿ ಪ್ರಶಸ್ತಿ’ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಪ್ರೊ. ಹಂಪ ನಾಗರಾಜಯ್ಯ, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಪತ್ರಕರ್ತ ಟಿ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.






