ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ಸಂಘಟಿತ ಪ್ರಯತ್ನ ಅಗತ್ಯ: ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ

ಬೆಂಗಳೂರು: ಪ್ರಸಕ್ತ ಸನ್ನಿವೇಶದಲ್ಲಿ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದು ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಹಝ್ರತ್ ಮೌಲಾನಾ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ಕರೆ ನೀಡಿದರು.
ಶನಿವಾರ ಮಹದೇವಪುರ ಕ್ಷೇತ್ರದ ಕಾಡುಗುಡಿ ಈದ್ಗಾ ಮೈದಾನದಲ್ಲಿ ವೈಟ್‍ಫೀಲ್ಡ್, ಕೆ.ಆರ್.ಪುರ, ಆನೇಕಲ್, ವಿಜಯಪುರ ಸೇರಿದಂತೆ ಇನ್ನಿತರ ವಲಯಗಳ ಜಮೀಯತ್ ಉಲಮಾ ಹಿಂದ್‍ನ ಪದಾಧಿಕಾರಿಗಳು ಹಾಗೂ ಮಸೀದಿಗಳ ಮುಖ್ಯಸ್ಥರಿಗಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಮೀಯತ್ ಉಲಮಾ ಹಿಂದ್ ಬೆಂಗಳೂರು ಜಿಲ್ಲೆಯ ಐದು ತಾಲೂಕುಗಳನ್ನು 20 ವಲಯಗಳಾಗಿ ವಿಂಗಡಿಸಿ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಹೊಸದಾಗಿ ರಚನೆಯಾಗಿರುವ ವೈಟ್‍ಫೀಲ್ಡ್ ಸೇರಿದಂತೆ ಇನ್ನಿತರ ವಲಯಗಳ ಪದಾಧಿಕಾರಿಗಳು ಯಾವ ರೀತಿ ಕೆಲಸ ಕಾರ್ಯಗಳನ್ನು ನಡೆಸಬೇಕು ಎಂಬುದರ ಕುರಿತು ಈ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ಜಮೀಯತ್ ಉಲಮಾ ಹಿಂದ್ ಸ್ವಾತಂತ್ರ್ಯ ಪೂರ್ವದಿಂದಲೂ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಮುಸ್ಲಿಮರ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಕ್ಕುಗಳ ರಕ್ಷಣೆ, ಸಮುದಾಯದಲ್ಲಿರುವ ಕೆಡಕುಗಳನ್ನು ನಿರ್ಮೂಲನೆ ಮಾಡುವುದು, ಶೈಕ್ಷಣಿಕ ರಂಗದಲ್ಲಿ ಸಮುದಾಯವನ್ನು ಮುಂದಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಇಫ್ತಿಖಾರ್ ಅಹ್ಮದ್ ಖಾಸ್ಮಿ ತಿಳಿಸಿದರು.
ಸರಕಾರದ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವುದು, ಪ್ರಚಲಿತ ವಿಚಾರಗಳು, ಸವಾಲುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಸುಮಾರು 30 ಅಂಶಗಳನ್ನು ಮುಂದಿಟ್ಟುಕೊಂಡು ನಾವು ಸಮಾಜದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಮದ್ರಸಾ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣ ನೀಡಲು, ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್(ಎನ್‍ಐಒಎಸ್) ಮೂಲಕ ಎಸೆಸೆಲ್ಸಿ ಪರೀಕ್ಷೆ ಬರೆಯಲು ತರಬೇತಿ ನೀಡಲಾಗುತ್ತಿದೆ. ಇಂದು ಸಾವಿರಾರು ಮದ್ರಸಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ ಎಂದು ಇಫ್ತಿಖಾರ್ ಅಹ್ಮದ್ ಖಾಸ್ಮಿ ತಿಳಿಸಿದರು.
ಡಿವೈಎಸ್ ಸರ್ವೀಸ್ ಫಾರ್ ಎವರ್ ಫೌಂಡೇಶನ್(ಡಿಎಸ್‍ಎಫ್) ಸಂಸ್ಥಾಪಕ ಡಾ.ಸೈಯದ್ ಮುಝಮ್ಮಿಲ್ ಅಹ್ಮದ್ ಮಾತನಾಡಿ, ಜಮೀಯತ್ ಉಲಮಾ ಹಿಂದ್ ಸಂಘಟನೆಯ ಮೂಲಕ ಹೊಸ ಹೆಜ್ಜೆ ಇಡಲು ನಾವು ಮುಂದಾಗಿದ್ದೇವೆ. ಪ್ರಮುಖವಾಗಿ ಮೂರು ಕಾರ್ಯಕ್ರಮಗಳ ಮೂಲಕ ಕಾರ್ಯಾರಂಭ ಮಾಡಲು ಬಯಸಿದ್ದೇವೆ ಎಂದು ಹೇಳಿದರು.
ಡಿ.25ರಂದು ಸೀರತ್ ಉನ್ ನಬಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುವುದು. ಇದರಲ್ಲಿ ಸರ್ವ ಧರ್ಮದ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗುವುದು. ಪ್ರಥಮ ಬಹುಮಾನವಾಗಿ 10 ಸಾವಿರ ರೂ.ನಗದು, ಅದೇ ರೀತಿ ದ್ವಿತಿಯ, ತೃತೀಯ ಸ್ಥಾನ ಪಡೆದವರಿಗೂ ಡಿಎಸ್‍ಎಫ್ ಮೂಲಕ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಬಹುತೇಕ ಚಾಲಕರು ಎಸೆಸೆಲ್ಸಿವರೆಗೆ ಶಿಕ್ಷಣ ಪಡೆದಿರುವುದಿಲ್ಲ. ಚಾಲನಾ ಪರವಾನಿಗಿ, ಪಾಸ್‍ಪೋರ್ಟ್ ಸೇರಿದಂತೆ ಇನ್ನಿತರ ಸರಕಾರಿ ದಾಖಲೆಗಳಿಗೆ ಎಸೆಸೆಲ್ಸಿ ಕಡ್ಡಾಯವಾಗಿದೆ. ಆದುದರಿಂದ, ಎನ್‍ಐಒಎಸ್ ಮೂಲಕ ಆಟೋಚಾಲಕರು, ಕ್ಯಾಬ್ ಚಾಲಕರಿಗೆ ಎಸೆಸೆಲ್ಸಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ತರಬೇತಿ ನೀಡಲಾಗುವುದು ಎಂದು ಮುಝಮ್ಮಿಲ್ ಅಹ್ಮದ್ ಹೇಳಿದರು.
ವಿವಾಹ ಪೂರ್ವ ಕೌನ್ಸಿಲಿಂಗ್:
ಸಮಾಜದಲ್ಲಿ ಇಂದು ಕೌಟುಂಬಿಕ ಸಮಸ್ಯೆಗಳು, ವಿವಾಹ ವಿಚ್ಛೇಧನ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ವಿದ್ಯಾವಂತರೇ ಇಂತಹ ಸಮಸ್ಯೆಗಳಿಗೆ ಗುರಿಯಾಗುತ್ತಿರುವುದು ಆತಂಕಕಾರಿ. ಆದುದರಿಂದ, ಜಮೀಯತ್ ಉಲಮಾ ಹಿಂದ್ ಹಾಗೂ ಡಿಎಸ್‍ಎಫ್ ಮೂಲಕ ಯುವಕ, ಯುವತಿಯರಿಗೆ ವಿವಾಹ ಪೂರ್ವ ಕೌನ್ಸಿಲಿಂಗ್ ನಡೆಸಿ ಅವರಿಗೆ ಅಗತ್ಯ ಮಾರ್ಗದರ್ಶನ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಾಗಾರದಲ್ಲಿ ಮೌಲಾನಾ ಝಫರ್ ಇಮಾಮ್ ಸಾಬ್ ಮಿಫ್ತಾಹಿ, ಮೌಲಾನಾ ಮುಹಮ್ಮದ್ ಶೈಖ್ ನದ್ವಿ, ಡಿಎಸ್‍ಎಫ್ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ತಬ್ರೇಝ್, ಕಾಡುಗುಡಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಇಬ್ರಾಹೀಂ ಯಾನೆ ಚಾಂದ್ ಭಾಯ್, ಫಿರೋಝ್ ಅಹ್ಮದ್ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.







