ಇಂಡಿಗೋ ಅವ್ಯವಸ್ಥೆ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮುತ್ತಿಗೆಗೆ ಹೊರಟ ವಾಟಾಳ್ ನಾಗರಾಜ್ರನ್ನು ದಾರಿಯಲ್ಲೇ ತಡೆದ ಪೊಲೀಸರು

ವಾಟಾಳ್ ನಾಗರಾಜ್ (File Photo)
ಬೆಂಗಳೂರು: ಇಂಡಿಗೋ ವಿಮಾನಗಳ ಸಂಚಾರ ಸ್ಥಗಿತದ ವಿರುದ್ಧ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಹೊರಡುತ್ತಿದ್ದಾಗ ದೇವನಹಳ್ಳಿ ಹತ್ತಿರದ ಬಾಗಲೂರಿನಲ್ಲಿ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಸುಮಾರು 6 ದಿನದಿಂದ ಇಡೀ ದೇಶದಲ್ಲಿ ಸಾವಿರಾರು ಇಂಡಿಗೋ ವಿಮಾನಗಳು ಸ್ಥಗಿತಗೊಂಡಿವೆ. ವಿಮಾನ ನಿಲ್ದಾಣದಲ್ಲಿ ಅನೇಕ ಪ್ರಯಾಣಿಕರು ಕಣ್ಣೀರಿಡುತ್ತಿದ್ದಾರೆ. ಪೂಜೆ, ಸಾವು, ಮದುವೆಗಳಿಗೆ ಹೋಗಲು ಆಗುತ್ತಿಲ್ಲ. ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು ಗೊತ್ತಿಲ್ಲದಿರುವುದು ನಾಚಿಕೆಗೇಡು. ಯಾವೊಬ್ಬ ಸಚಿವರೂ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರ ಕಷ್ಟ ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಮಾಡಲೂ ಕೂಡ ನಮಗೆ ಬಿಡುತ್ತಿಲ್ಲ. ಕರ್ನಾಟಕ ಪೊಲೀಸರಿಗೆ ನಾಚಿಕೆಗೇಡು. ಲಕ್ಷಾಂತರ ಹೋರಾಟ ಮಾಡಿದ್ದೇನೆ. ಈ ರೀತಿಯ ಪೊಲೀಸರನ್ನು ನೋಡಿಲ್ಲ. ಹಿಟ್ಲರ್ ಕಾಲದಲ್ಲೂ ಈ ರೀತಿ ಇರಲಿಲ್ಲ ಎಂದರು.
ವಿಮಾನ ಸೇವೆಯನ್ನು ಸಂಪೂರ್ಣವಾಗಿ ಸರಕಾರವೇ ಮಾಡಬೇಕು. ಖಾಸಗಿಯವರಿಗೆ ಅವಕಾಶ ನೀಡಬಾರದು. ಇಂಡಿಗೋ ವಿಮಾನವನ್ನು ವಶಕ್ಕೆ ತೆಗೆದುಕೊಂಡು, ಮಾಲಕರನ್ನು ಬಂಧಿಸಬೇಕು. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.







