ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಸಾಕ್ಷಿಗೆ ಬೆದರಿಕೆ ಆರೋಪ; ತನಿಖೆ ನಡೆಸಲು ಎಸ್‌ಐಟಿಗೆ ಕೋರ್ಟ್ ಆದೇಶ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಸಾಕ್ಷಿಗೆ ಬೆದರಿಕೆ ಕರೆ ಬಂದಿರುವ ಸಂಬಂಧ ತನಿಖೆ ನಡೆಸುವಂತೆ ಅಪರಾಧ ತನಿಖಾ ವಿಭಾಗದ (ಸಿಐಡಿ) ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ (ಆಗಸ್ಟ್ 20) ಆದೇಶಿಸಿದೆ.
ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ 4ನೇ ಸಾಕ್ಷಿಯಾಗಿರುವ 43 ವರ್ಷದ ಸಾಮಾಜಿಕ ಕಾರ್ಯಕರ್ತೆಯ ಹೇಳಿಕೆ ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ. ಶಿವಪ್ರಸಾದ್ ಅವರು ತನಿಖೆ ನಡೆಸುವಂತೆ ಎಸ್‌ಐಟಿ ಮುಖ್ಯಸ್ಥರಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಈ ನಿರ್ದೇಶನ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ 2026ರ ಜುಲೈ 6ರಂದು ಸಾಕ್ಷಿ ನುಡಿದಿದ್ದಾರೆ. ಆಗಸ್ಟ್ 20ರಂದು ಪಾಟೀ ಸವಾಲಿನ ವೇಳೆ ಸಾಕ್ಷಿಯು ಹಿಂದಿನ ಬಾರಿ ವಿಚಾರಣೆಯ ಬಳಿಕ ಆರೋಪಿಯ ಕಡೆಯವರಿಂದ ಬೆದರಿಕೆ ಫೋನ್ ಕರೆಗಳನ್ನು ಸ್ವೀಕರಿಸಿರುವುದಾಗಿ ಆರೋಪಿಸಿದ್ದರು. ಇದನ್ನು ಆಧರಿಸಿ ನ್ಯಾಯಾಲಯ ತನಿಖೆ ನಡೆಸುವಂತೆ ಎಸ್‌ಐಟಿಗೆ ನಿರ್ದೇಶಿಸಿದೆ.
ಸಾಕ್ಷಿ ನುಡಿದ ಬಳಿಕ ತನಗೆ ಮತ್ತು ತನ್ನ ಪುತ್ರನಿಗೆ ಏನಾದರೂ ಆದರೆ ಆರೋಪಿಗಳೇ ಜವಾಬ್ದಾರಿಯಾಗಿದ್ದಾರೆ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತೆ, ಆರೋಪಿಗಳ ಕಡೆಯಿಂದ ಬೆದರಿಕೆ ಸಾಧ್ಯತೆಯ ಬಗ್ಗೆಯೂ ಆಕೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಆಕೆಗೆ ಕಾನೂನಿನ ಅಡಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.






