ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ನಿರೀಕ್ಷಿತ ಫಲಿತಾಂಶ ನೀಡಿಲ್ಲ : ಪುರುಷೋತ್ತಮ ಬಿಳಿಮಲೆ
ಆಂಗ್ಲ ಮಾಧ್ಯಮ ಸರಕಾರಿ ಶಾಲೆಗಳ ಮಕ್ಕಳ ಇಂಗ್ಲಿಷ್ ಭಾಷಾ ಕಲಿಕೆಯ ಗುಣಮಟ್ಟದ ವರದಿ

ಬೆಂಗಳೂರು : ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ 7ನೇ ತರಗತಿಯ ಮಕ್ಕಳಿಗೂ ಇಂಗ್ಲಿಷ್‌ನಲ್ಲಿ ಪುಟ್ಟ ಕಥೆಯೊಂದನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಓದಿದ ಪಠ್ಯದ ಅರ್ಥವನ್ನು ಗ್ರಹಿಸುವುದರಲ್ಲಿಯೂ ತೊಂದರೆ ಎದುರಿಸುತ್ತಿದ್ದಾರೆ. ಸ್ವತಂತ್ರ ವಾಕ್ಯ ರಚನೆ, ಸಂಭಾಷಣೆ ಮತ್ತು ಬರವಣಿಗೆಯಲ್ಲೂ ಮಕ್ಕಳು ಹಿಂದುಳಿದಿದ್ದಾರೆ ಎನ್ನುವ ಪ್ರಮುಖ ಅಂಶಗಳು ‘ರಾಜ್ಯದ ಆಂಗ್ಲ ಮಾಧ್ಯಮ ಸರಕಾರಿ ಶಾಲೆಗಳ ಮಕ್ಕಳ ಇಂಗ್ಲಿಷ್ ಭಾಷಾ ಕಲಿಕೆಯ ಗುಣಮಟ್ಟ’ದ ಕುರಿತು ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿವೆ ಎಂದು ತಿಳಿಸಿದ್ದಾರೆ.
2019-20ನೇ ಶೈಕ್ಷಣಿಕ ವರ್ಷದಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಗೊಂಡ ಆಯ್ದ ಸರಕಾರಿ ಶಾಲೆಗಳ 6ನೇ ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರವಣಿಗೆಯ ನಾಲ್ಕು ಪ್ರಮುಖ ಭಾಷಾ ಕೌಶಲಗಳ ಆಧಾರದಲ್ಲಿ ಈ ಮೌಲ್ಯಮಾಪನವನ್ನು ನಡೆಸಲಾಗಿದೆ. ಈ ಅಧ್ಯಯನವು ಭಾಷಾ ಕಲಿಕೆಯಲ್ಲಿ ಮಕ್ಕಳ ಸಕ್ರಿಯ ಪಾಲ್ಗೊಳ್ಳುವಿಕೆ, ಸಂವಹನ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ ಎಂದು ವಿವರಿಸಿದ್ದಾರೆ.
ಕೇವಲ ಬೋಧನಾ ಮಾಧ್ಯಮವನ್ನು ಬದಲಾಯಿಸುವುದರಿಂದ ಭಾಷಾ ಕಲಿಕೆ ಯಶಸ್ವಿಯಾಗುವುದಿಲ್ಲ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದೇ ಅತ್ಯುತ್ತಮ ಮಾದರಿ ಎಂಬುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈ ಅಧ್ಯಯನ ಸ್ಪಷ್ಟಪಡಿಸಿದೆ. ಸರಕಾರವು ಕನ್ನಡದ ಕಲಿಕೆಯನ್ನು ಬಲಪಡಿಸುವುದರ ಜೊತೆಗೆ ಮಾತ್ರ ಇಂಗ್ಲಿಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವ ಕ್ರಮಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ.
ಚಾಮರಾಜನಗರದ ದೀನಬಂಧು ಟ್ರಸ್ಟ್‌ನ ಮುಖ್ಯಸ್ಥ ಡಾ.ಜಿ.ಎಸ್.ಜಯದೇವ, ಲೇಖಕ ಡಾ.ಕೃಷ್ಣಮೂರ್ತಿ ಹನೂರು ಹಾಗೂ ಇತರ ಶಿಕ್ಷಣ ತಜ್ಞರು ಪ್ರಾಧಿಕಾರದ ಸಹಯೋಗದಲ್ಲಿ ಈ ಅಧ್ಯಯನವನ್ನು ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಮಕ್ಕಳ ಕೇಂದ್ರಿತ, ಸಂವಹನಾಧಾರಿತ ಮತ್ತು ಸಂದರ್ಭೋಚಿತ ಭಾಷಾ ಬೋಧನೆಗೆ ಒತ್ತು ನೀಡುವ ಅಗತ್ಯವನ್ನು ಈ ವರದಿ ಪ್ರತಿಪಾದಿಸಿದೆ. ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರಕಾರಕ್ಕೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.
ವರದಿಯ ಪ್ರಮುಖ ಅಂಶಗಳು
ಇಂಗ್ಲಿಷ್ ಭಾಷೆಯೊಂದಿಗೆ ಸೀಮಿತ ಒಡನಾಟ
ಮಾತನಾಡುವಲ್ಲಿ ಆತ್ಮವಿಶ್ವಾಸದ ಕೊರತೆ
ಬರವಣಿಗೆಯಲ್ಲಿ ತೊಂದರೆ
ಓದು ಮತ್ತು ಗ್ರಹಿಕೆಯ ನಡುವಿನ ಅಂತರ
ಕಂಠಪಾಠಕ್ಕೆ ಸೀಮಿತವಾದ ಕಲಿಕೆ
ಪ್ರಮುಖ ಶಿಫಾರಸುಗಳು
ಬುನಾದಿ ಹಂತದಲ್ಲಿ ಕನ್ನಡ ಮಾಧ್ಯಮ ಬಲಪಡಿಸುವುದು.
ಇಂಗ್ಲಿಷ್ ಭಾಷೆಯನ್ನು ಎರಡನೇ ಭಾಷೆಯಾಗಿ ಪರಿಚಯಿಸುವುದು.
ಕನ್ನಡ, ಇಂಗ್ಲಿಷ್ ಬೋಧನಾ ಪದ್ಧತಿಯ ಸುಧಾರಣೆ.
ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಆದ್ಯತೆ.






