ಕಾಂಗ್ರೆಸ್ ಸರಕಾರ ಜನರ ಜೇಬಿಗೆ ಕನ್ನ ಹಾಕದ ದಿನವಿಲ್ಲ : ಆರ್.ಅಶೋಕ್ ಟೀಕೆ

ಬೆಂಗಳೂರು, ಆ. 30: ‘ಈ ಜನವಿರೋಧಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿ ಇಲ್ಲ, ಕರ್ನಾಟಕ ರಾಜ್ಯಕ್ಕೆ ಉಳಿಗಾಲವಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಆಡು ಮುಟ್ಟದ ಸೊಪ್ಪಿಲ್ಲ’- ಕಾಂಗ್ರೆಸ್ ಸರಕಾರ ಜನರ ಜೇಬಿಗೆ ಕನ್ನ ಹಾಕದ ದಿನವಿಲ್ಲ. ನೀರು, ಹಾಲು, ಪೆಟ್ರೋಲ್, ಡಿಸೇಲ್, ಕರೆಂಟು, ಬಸ್ಸು, ಮೆಟ್ರೋ, ಆಸ್ತಿ ತೆರಿಗೆ, ಜನನ ಮರಣ ಪ್ರಮಾಣ ಪತ್ರದ ಶುಲ್ಕ ಸೇರಿ ಎಲ್ಲ ವಸ್ತು/ಸೇವೆಗಳ ಬೆಲೆಯನ್ನು ಈಗಾಗಲೇ ಮನಬಂದಂತೆ ಏರಿಸಿರುವ ಕಾಂಗ್ರೆಸ್ ಸರಕಾರದ ವಕ್ರ ದೃಷ್ಟಿ ಈಗ ಆಸ್ತಿ ನೋಂದಣಿ ಶುಲ್ಕದ ಮೇಲೆ ಬಿದ್ದಿದೆ’ ಎಂದು ಲೇವಡಿ ಮಾಡಿದ್ದಾರೆ.
‘ಆಸ್ತಿ ನೋಂದಣಿ ಶುಲ್ಕವನ್ನು ಏಕಾಏಕಿ ಶೇ.100ರಷ್ಟು ಏರಿಸುವ ಮೂಲಕ ಸರಕಾರ ಮತ್ತೊಮ್ಮೆ ತನ್ನ ಜನವಿರೋಧಿ ನೀತಿಯನ್ನು ಪ್ರದರ್ಶಿಸಿದೆ. ಸಿಎಂ ಸಿದ್ದರಾಮಯ್ಯನವರೇ, ಬೆಲೆಯೇರಿಕೆಯೇ ನಿಮ್ಮ ಅಸಲಿ ಗ್ಯಾರೆಂಟಿ ಆಗಿದೆಯಾ?. ಜೀವನವೆಲ್ಲ ಕಷ್ಟಪಟ್ಟು ಸಾಲ ಮಾಡಿ ಕುಟುಂಬಕ್ಕೆ ಸ್ವಂತ ಗೂಡು ಮಾಡಿಕೊಳ್ಳಲು ನಿವೇಶವವನ್ನೋ, ಫ್ಲಾಟ್ ಅನ್ನೋ ಖರೀದಿ ಮಾಡಲು ಹೊರಟರೆ ಅದಕ್ಕೆ ಶೇ.7.6ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಭರಿಸಬೇಕೆಂದರೆ ಬಡ-ಮಧ್ಯಮ ವರ್ಗದ ಜನ ಸ್ವಂತ ಸೂರು ಮಾಡಿಕೊಳ್ಳುವಾದರೂ ಹೇಗೆ?’ ಎಂದು ಅಶೋಕ್ ಪ್ರಶ್ನಿಸಿದ್ದಾರೆ.







