‘ರಾಜ್ಯದಲ್ಲಿ ದಾಖಲೆಯ 143 ದಶಲಕ್ಷ ಯೂನಿಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ’

Photo:Rueters
ಬೆಂಗಳೂರು, ಆ.19: ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲು ಪ್ರಸಕ್ತ ಶೇ.75 ರಿಂದ ಶೇ.85ಕ್ಕೆ ಏರಿದ್ದು, ಆ.18ರಂದು ನವೀಕರಿಸಬಹುದಾದದ ಇಂಧನ ಮೂಲಗಳಿಂದ 143 ದಶಲಕ್ಷ(ಮಿಲಿಯನ್) ಯೂನಿಟ್ ವಿದ್ಯುತ್ ಉತ್ಪಾದನೆಯಾಗುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ.
ಇತ್ತೀಚಿನ ದಿನಗಳಲ್ಲಿ ಉಷ್ಣ, ಜಲ ವಿದ್ಯುತ್ನಂಥ ಸಾಂಪ್ರದಾಯಿಕ ಇಂಧನದ ಅವಲಂಬನೆ ಕಡಿತಗೊಂಡಿದ್ದು, ನವೀಕರಿಸಬಹುದಾದದ ಇಂಧನ ಮೂಲಗಳಿಂದ ಆ.18ರಂದು 143 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಿಂದಾಗಿ ಗ್ರಿಡ್ಗೆ ಶೇ.80ರಷ್ಟು ಹಸಿರು ಇಂಧನ ಪೂರೈಕೆಯಾಗಿದೆ. ಇದು ನವೀಕರಿಸಬಹುದಾದ ಇಂಧನ ಮೂಲಗಳಿಗೆ ರಾಜ್ಯ ಸರಕಾರ ನೀಡುತ್ತಿರುವ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ.
ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆ ಸಾಕಷ್ಟು ಹೆಚ್ಚಾಗಿದೆ. ಬೇಡಿಕೆಯ ಶೇ.75ರಿಂದ ಶೇ.85ರಷ್ಟು ವಿದ್ಯುತ್ ಈ ಮೂಲಗಳಿಂದಲೆ ಉತ್ಪಾದನೆಯಾಗುತ್ತಿದೆ. ಅದರಲ್ಲೂ, ಪವನ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಹೆಚ್ಚಳ ಕಂಡಿದ್ದು, ಪ್ರಸಕ್ತ ದಿನಕ್ಕೆ ಸರಾಸರಿ 54 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಪವನ ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ:
ಪ್ರಸಕ್ತ ವರ್ಷ ಪವನ ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ ಬರೆಯಲಾಗಿದೆ. ಮುಂಗಾರು ಆರಂಭವಾದ ಮೇಲೆ ಪ್ರತಿನಿತ್ಯ ಸರಾಸರಿ 50 ಮಿಲಿಯನ್ ಯೂನಿಟ್ಗಿಂತ ಹೆಚ್ಚು ವಿದ್ಯುತ್ ಈ ಮೂಲಗಳಿಂದ ಉತ್ಪಾದನೆಯಾಗಿದೆ. ಪ್ರಸಕ್ತ 65.80 ಮಿಲಿಯನ್ ಯೂನಿಟ್ ಪವನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ಜಲ ವಿದ್ಯುತ್ ಮತ್ತು ಉಷ್ಣ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಿದೆ. ರಾಜ್ಯದ ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿ ಉಷ್ಣ ವಿದ್ಯುತ್ ಪಾಲು ಶೇ.15-ಶೇ.25ರಷ್ಟಿದೆ.
ಇಳಿಕೆಯಾದ ವಿದ್ಯುತ್ ಬೇಡಿಕೆ:
ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿದ್ಯುತ್ ಬಳಕೆ ಪ್ರಮಾಣ ನಿರೀಕ್ಷೆಗೂ ಮೀರಿ ಇಳಿಮುಖವಾಗಿದ್ದು, ರಾಜ್ಯದಲ್ಲಿ ವಿದ್ಯುತ್ ಬಳಕೆ 179.03 ದಶಲಕ್ಷ ಯೂನಿಟ್ (ಮಿಲಿಯನ್ ಯೂನಿಟ್)ಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದ ವಿದ್ಯುತ್ ಬಳಕೆ 200.35 ಮಿಲಿಯನ್ ಯೂನಿಟ್ ಇತ್ತು. ಈ ವರ್ಷ ಸರಾಸರಿ ವಿದ್ಯುತ್ ಬಳಕೆ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇ.15ರಷ್ಟು ಹೆಚ್ಚಿದ್ದರೂ, ಪ್ರಸಕ್ತ 21 ದಶಲಕ್ಷ ಯೂನಿಟ್ಗಳಷ್ಟು ಕಡಿಮೆ ವಿದ್ಯುತ್ ಬಳಕೆಯಾಗುತ್ತಿದೆ.
ರಾಜ್ಯದಲ್ಲಿ ಜನವರಿ ಅಂತ್ಯದ ವೇಳೆಗೆ ವಿದ್ಯುತ್ ಬೇಡಿಕೆ ಹೆಚ್ಚಾಗಲು ಆರಂಭವಾಯಿತು. ಬೇಸಿಗೆಯಲ್ಲಿ ದೈನಂದಿನ ಬಳಕೆ 350 ಮಿಲಿಯನ್ ಯೂನಿಟ್ಗಳನ್ನು ಮೀರುವ ನಿರೀಕ್ಷೆಯಿತ್ತಾದರೂ ಮುಂಗಾರು ಪೂರ್ವ ಮಳೆಯಿಂದ ಬೇಡಿಕೆ 320-330 ಮಿಲಿಯನ್ ಯೂನಿಟ್ಗಳ ವ್ಯಾಪ್ತಿಯಲ್ಲಿಯೇ ಇತ್ತು. ಮೇ 16-17ರ ಸುಮಾರಿಗೆ ಪೂರ್ವ ಮುಂಗಾರು ಮಳೆ ಮತ್ತು ನಿಗದಿಗಿಂತ ಮುನ್ನ ಮುಂಗಾರು ಪ್ರವೇಶಿಸಿದ್ದರಿಂದ ವಿದ್ಯುತ್ ಬೇಡಿಕೆ ಕಡಿಮೆಯಾಗಿ ದಿನಕ್ಕೆ 230-240 ಮಿಲಿಯನ್ ಯೂನಿಟ್ಗಳಿಗೆ ಇಳಿಯಿತು. ಇದೀಗ ಕನಿಷ್ಟ ಮಟ್ಟಕ್ಕೆ ಬಂದಿದೆ.
ವಿದ್ಯುತ್ ಬೇಡಿಕೆ ಕಡಿಮೆಯಾಗುವುದರ ಜತೆಗೆ ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿ ದ್ದರಿಂದ ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಖರೀದಿಸುತ್ತಿದ್ದ ವಿದ್ಯುತ್ ಪ್ರಮಾಣವೂ ಕುಸಿದಿದೆ. ಇದರಿಂದಾಗಿ ವಿದ್ಯುತ್ ಖರೀದಿಗೆ ಸರಕಾರ ಮಾಡುವ ವೆಚ್ಚವೂ ಇಳಿಮುಖವಾಗಿದೆ.
ಕರ್ನಾಟಕವು ಹಲವಾರು ಉಪಕ್ರಮಗಳ ಮೂಲಕ, ವಿಶೇಷವಾಗಿ ಸೌರ ವಿದ್ಯುತ್ ಪಾರ್ಕ್, ಪವನ ವಿದ್ಯುತ್ ಯೋಜನೆಗಳ ಮೂಲ ನವೀಕರಿಸಬಹುದಾದ ಇಂಧನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ. ನವೀಕರಿಸಬಹುದಾದ ಇಂಧನಕ್ಕಾಗಿ ನಮ್ಮ ಕಾರ್ಯತಂತ್ರಗಳು ಮತ್ತು ಗುರಿ ಸಾಧಿಸಲು ಕೈಗೊಂಡ ಮಹತ್ವಾಕಾಂಕ್ಷಿ ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ.
-ಗೌರವ್ ಗುಪ್ತಾ, ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ
ನವೀಕರಿಸಬಹುದಾದ ಇಂಧನ ಮೂಲಗಳಿಂದ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ. ಇದರಿಂದ ಸರಕಾರದ ಮೇಲಿನ ಹೊರೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಸರಕಾರ ಈ ಮೂಲಗಳಿಗೆ ಆದ್ಯತೆ ನೀಡುತ್ತಿದೆ. ಇದರಿಂದ ಜಲ ಮತ್ತು ಉಷ್ಣ ವಿದ್ಯುತ್ ಸ್ಥಾವರಗಳ ಮೇಲಿನ ಹೊರೆ ಕಡಿಮೆಯಾಗಿ ಬೇಸಿಗೆಯಲ್ಲಿ ಈ ಮೂಲಗಳಿಂದ ಹೆಚ್ಚು ವಿದ್ಯುತ್ ಉತ್ಪಾದಿಸಿ ಬೇಡಿಕೆಗೆ ತಕ್ಕಂತೆ ಪೂರೈಸಲು ಅನುಕೂಲವಾಗುತ್ತದೆ.
-ಕೆ.ಜೆ.ಜಾರ್ಜ್, ಇಂಧನ ಸಚಿವ







