ಬೆಂಗಳೂರಿನಲ್ಲಿ ‘ಸುರಂಗ ರಸ್ತೆ’ ಅಗತ್ಯತೆ ಕುರಿತು ರಾಜ್ಯ ಸರಕಾರಕ್ಕೆ ವರದಿ: ಎಂ.ಲಕ್ಷ್ಮಣ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಉದ್ದೇಶಿಸಿರುವ ಸುರಂಗ ರಸ್ತೆಯ ಅಗತ್ಯತೆ ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕೆಂದು ರಾಜ್ಯ ಸರಕಾರಕ್ಕೆ ಸಿವಿಲ್ ಇಂಜಿನಿಯರ್ ತಜ್ಞರ ತಂಡವು ವರದಿ ಸಲ್ಲಿಸಿದೆ ಎಂದು ಭಾರತೀಯ ಇಂಜಿನಿಯರ್ ಗಳ ಸಂಸ್ಥೆ(ಐಇಐ) ರಾಜ್ಯ ಕಾರ್ಯದರ್ಶಿ ಎಂ. ಲಕ್ಷ್ಮಣ್ ಹೇಳಿದ್ದಾರೆ.
ಮಂಗಳವಾರ ನಗರದ ಭಾರತೀಯ ಇಂಜಿನಿಯರ್ ಗಳ ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಿದ್ದ ಬೆಂಗಳೂರಿನಲ್ಲಿ ಸುರಂಗ ರಸ್ತೆಗಳ ಕುರಿತ ಚರ್ಚೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ವಿಶ್ವದಲ್ಲಿಯೇ ಸದ್ದು ಮಾಡಿದೆ. ಇಂತಹ ಸಂದರ್ಭದಲ್ಲಿ ಸುರಂಗ ಮಾರ್ಗ ನಿರ್ಮಾಣದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಈ ಸುರಂಗ ರಸ್ತೆಗಳಿಂದ ವಾಹನ ಸವಾರರಿಗೆ ಅನುಕೂಲವೇ ಹೆಚ್ಚಿದೆ. ಬೆಂಗಳೂರನ್ನು ಬಿಟ್ಟು ಹೊರಗಡೆ ಪ್ರಯಾಣ ಬೆಳೆಸುವವರ ಸಮಯವನ್ನು ಸುರಂಗ ರಸ್ತೆ ನಿರ್ಮಾಣದಿಂದ ಉಳಿಸಬಹುದಾಗಿದೆ. ಈಗಾಗಲೇ ದೇಶದಲ್ಲಿ ಹಲವು ಕಡೆ ಸುರಂಗ ರಸ್ತೆ ನಿರ್ಮಾಣಮಾಡಲಾಗಿದ್ದು, ಯಶಸ್ವಿಯೂ ಆಗಿದೆ. ಇಂತಹ ನೈಜ ಅಂಶಗಳು ನಮ್ಮ ಮುಂದೆ ಇದ್ದರೂ, ರಾಜಕೀಯ ಕಾರಣಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು ಒಳ್ಳೆಯದಲ್ಲ ಎಂದು ಹೇಳಿದರು.
ರಾಜ್ಯ ಸರಕಾರ ಉದ್ದೇಶಿಸಿರುವ ಸುರಂಗ ರಸ್ತೆ ಬಗ್ಗೆ ಸಿವಿಲ್ ಇಂಜಿನಿಯರ್ ತಜ್ಞರು ಅಧ್ಯಯನ ನಡೆಸಿದ್ದಾರೆ. ಜನ ಸಮುದಾಯಕ್ಕೆ ತೊಂದರೆ ಆಗದಂತೆ ಭವಿಷ್ಯದಲ್ಲಿ ತುಂಬಾ ಅನುಕೂಲ ಆಗುವ ಅಂಶಗಳೇ ಇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುರಂಗ ರಸ್ತೆಗೆ ತಗಲುವ ವೆಚ್ಚ, ಸಮಯ, ಮಾರ್ಗಗಳು ಹೀಗೆ ಹಲವು ಅಂಶಗಳ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು, ಸುರಂಗ ರಸ್ತೆ ಯೋಜನೆ ಕೈಬಿಡಬೇಡಿ ಎಂದು ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.
ಸುರಂಗ ರಸ್ತೆಯಿಂದ ಲಾಲ್‍ಬಾಗ್ ಸೇರಿದಂತೆ ಹಲವರ ಆಸ್ತಿಪಾಸ್ತಿ ಹಾನಿ ಆಗಲಿದೆ ಎಂದು ಅಪಪ್ರಚಾರ ಮಾಡಲಾಗುತ್ತದೆ. ವಾಸ್ತವದಲ್ಲಿ ಆಸ್ತಿ ಹಾನಿ ಆಗಲ್ಲವೆಂದು ನಾನು ನಂಬಿದ್ದೇನೆ. ಸುರಂಗ ಮಾರ್ಗವೂ ಭೂಮಿ ಒಳಗೆ ಇರಲಿದೆ ಹೊರತು, ಮೇಲೆ ಯಾವುದೇ ಚಟುವಟಿಕೆ ಕಂಡುಬರುವುದಿಲ್ಲ.ಈಗಾಗಲೇ ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ಸುರಂಗ ಕಾಮಗಾರಿ ನಡೆಸಲಾಗಿತ್ತು.ಹೀಗಾಗಿ, ಯಾರು ಆತಂಕ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ಲಕ್ಷ್ಮಣ್ ತಿಳಿಸಿದರು. ಈ ವೇಳೆ ಸಂಸ್ಥೆಯ ಡಾ.ರಂಗರೆಡ್ಡಿ, ಡಾ.ಎನ್.ಚಿಕ್ಕಣ್ಣ ಸೇರಿದಂತೆ ಪ್ರಮುಖರಿದ್ದರು.
ಜಾಗೃತಿ ಮೂಡಿಸಲಿ: ‘ಸುರಂಗ ರಸ್ತೆಯಲ್ಲಿ ಬರೀ ಕಾರುಗಳು, ಶ್ರೀಮಂತರು ಹೋಗುತ್ತಾರೆ ಎನ್ನುವ ಸುಳ್ಳು ಅಂಶಗಳನ್ನು ಉದ್ದೇಶಪೂರಕವಾಗಿ ಹರಿಬಿಡಲಾಗಿದೆ. ಇಂತಹ ಸುಳ್ಳು, ತಪ್ಪು ಮಾಹಿತಿಯನ್ನು ರಾಜ್ಯ ಸರಕಾರ ನಿಯಂತ್ರಿಸುವ ಜತೆಗೆ, ಸುರಂಗ ಮಾರ್ಗದ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕು’
-ಎಂ.ಲಕ್ಷ್ಮಣ್, ರಾಜ್ಯ ಕಾರ್ಯದರ್ಶಿ, ಭಾರತೀಯ ಇಂಜಿನಿಯರ್‍ಗಳ ಸಂಸ್ಥೆ(ಐಇಐ)







