Bengaluru | ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ 2026ರ ಕಾಯ್ದೆಯ ವಿರುದ್ಧ ಖಂಡನಾ ನಿರ್ಣಯ

ಬೆಂಗಳೂರು: ಕರ್ನಾಟಕ ಜನಪರ ಹೋರಾಟಗಾರರು, ಸಾಹಿತಿಗಳು, ಚಿಂತಕರು ಸೇರಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ 2026ರ ಕಾಯ್ದೆಯ ವಿರುದ್ಧ ಖಂಡನಾ ನಿರ್ಣಯ ಕೈಗೊಂಡಿದ್ದಾರೆ.
ಅಂತರ್ ಲಿಂಗಿ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಅಪರಾಧೀಕರಣಗೊಳಿಸುವ ವ್ಯವಸ್ಥೆಯ ವಿರುದ್ಧವಾಗಿ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು.
ಇತ್ತೀಚೆಗಷ್ಟೇ ಸಂಸತ್‍ನ ಉಭಯ ಸದನಗಳಲ್ಲಿ ಅನಿರೀಕ್ಷಿತ ಮಸೂದೆಯೊಂದು ಮಂಡನೆಯಾಗಿದ್ದು, ಅದು ಕಾಯ್ದೆಯಾಗಿ ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಕಲ ಮೂಲಭೂತ ಹಾಗೂ ನಾಗರಿಕ, ಸಾಂವಿಧಾನಿಕ ಹಕ್ಕನ್ನು ಪಡೆಯುವಲ್ಲಿ ತೀರ ದೂರ ಉಳಿದಂತಾಗಿದೆ ಎಂದು ಲಿಂಗತ್ವ, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಗೌರವ, ಆತ್ಮವಿಶ್ವಾಸ, ಘನತೆಗೆ ವಿರುದ್ಧವಾಗಿರುವ 2026ರ ಕಾಯ್ದೆಯನ್ನು ತಿರಸ್ಕರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಲೈಂಗಿಕ ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸುವ ಕುರಿತು ಎಲ್ಲ ಪಕ್ಷಗಳು ತುರ್ತು ನಿರ್ಣಯ ಕೈಗೊಳ್ಳುವ ಜವಾಬ್ಧಾರಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮೇಲಿದೆ ಎಂದು ತಿಳಿಸಿದರು.
ಈ ವೇಳೆ ಚಿತ್ರನಟಿ ರಮ್ಯಾ, ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ನಟ ಚೇತನ್, ಮೇಘನ, ರಾಜ್ಯ ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟದ ಅಧ್ಯಕ್ಷರಾದ ಪ್ರಕಾಶಿ, ಕರ್ನಾಟಕ ಅಂತರ್ ಲಿಂಗಿ ಅಸೋಸಿಯೇಷನ್ ಅಧ್ಯಕ್ಷೆ ಅಬೇದ ಬೇಗಮ್, ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಸುನಂದಮ್ಮ, ಲೇಖಕಿ ಮಮತಾ ಸಾಗರ್, ಮೋನಿಕಾ, ರೂಮಿ ಹರೀಶ್, ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.







