ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕ ಪರಿಷ್ಕರಣೆ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜ್ಯ ಸರಕಾರವು ಎಲ್ಲ ವಾಹನಗಳಿಗೆ ಅನ್ವಯವಾಗುವಂತೆ ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿದ್ದು, ವಾಹನ ಮಾಲಕರು ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ(ಪಿಯುಸಿಸಿ) ಪಡೆಯಲು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.
ದ್ವಿಚಕ್ರ ವಾಹನಗಳಿಗೆ 65 ರೂ.ಗಳಿದ್ದ ಮಾಲಿನ್ಯ ಪರೀಕ್ಷಾ ಶುಲ್ಕವನ್ನು 80 ರೂ.ಗೆ ಹೆಚ್ಚಳ ಮಾಡಲಾಗಿದೆ. ಆಟೋರಿಕ್ಷಾ 75 ರೂ.ಗಳಿಂದ 80 ರೂ.ಗೆ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್/ ಸಿಎನ್ಜಿ/ ಎಲ್ಪಿಜಿ ಇಂಧನದ ನಾಲ್ಕು ಚಕ್ರ ವಾಹನಗಳಿಗೆ 115 ರೂ.ಗಳಿಂದ 150 ರೂ.ಗೆ ಹೆಚ್ಚಳ ಮಾಡಲಾಗಿದೆ. ಇನ್ನು ಎಲ್ಲ ಡೀಸೆಲ್ ವಾಹನಗಳಿಗೆ 160 ರೂ.ಗಳಿಂದ 200 ರೂ.ಗೆ ಹೆಚ್ಚಳ ಮಾಡಲಾಗಿದೆ.
ಇಂಧನ, ಬಾಡಿಗೆ, ಇಂಟರ್ನೆಟ್ ಸೇವೆ, ಉಪಕರಣಗಳ ನಿರ್ವಹಣೆ, ವಿದ್ಯುತ್ ಹಾಗೂ ಸಿಬ್ಬಂದಿ ವೇತನ ಸೇರಿದಂತೆ ಕಾರ್ಯಾಚರಣೆ ವೆಚ್ಚಗಳು ಗಣನೀಯವಾಗಿ ಹೆಚ್ಚಿರುವುದರಿಂದ ಶುಲ್ಕ ಪರಿಷ್ಕರಣೆ ಅಗತ್ಯವಾಗಿತ್ತು ಎಂದು ಪರೀಕ್ಷಾ ಕೇಂದ್ರಗಳ ನಿರ್ವಾಹಕರು ಇಲಾಖೆಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಶುಲ್ಕ ಪರಿಷ್ಕರಣೆ ಮಾಡಲಾಗಿದೆ.




