ಸೈಂಟ್ ಫ್ರಾನ್ಸಿಸ್ ಕಾವ್ಯ ಸ್ಪರ್ಧೆ: ರುಚಿತಾ ಬಿ.ಎಸ್. ಅವರ ‘ಯುದ್ಧ’ ಕವಿತೆಗೆ ಪ್ರಥಮ ಸ್ಥಾನ

ಬೆಂಗಳೂರು: ನಗರದ ಸೈಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಸೈಂಟ್ ಫ್ರಾನ್ಸಿಸ್ ಕಾವ್ಯ ಸ್ಪರ್ಧೆಯಲ್ಲಿ ಬಸವನಗುಡಿ ದಿ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿನಿ ರುಚಿತಾ ಬಿ.ಎಸ್. ಅವರ ‘ಯುದ್ಧ ಕವಿತೆಗೆ ಪ್ರಥಮ ಸ್ಥಾನ ಲಭಿಸಿದೆ.
ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಯುನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್, ಸಿಂಧು ಶ್ರೀ ಅವರ ‘ಒಂದು ವಿಶ್ವ-ಒಂದು ಕುಟುಂಬ’ ಕವಿತೆಗೆ ದ್ವಿತೀಯ ಹಾಗೂ ಸೈಂಟ್ ಫ್ರಾನ್ಸಿಸ್ ಕಾಲೇಜಿನ ವರುಣ್ ಜಿ. ಅವರ ‘ಭೂಮಿಗೆ ಬಂದ ಬೆಳಕಿನ ಅತಿಥಿ’ ಕವಿತೆಗೆ ತೃತೀಯ ಸ್ಥಾನ ಲಭಿಸಿತು.
ಬುಧವಾರ ನಗರದ ಸೈಂಟ್ ಫ್ರಾನ್ಸಿಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ‘ಸೈಂಟ್ ಫ್ರಾನ್ಸಿಸ್ ಕಾವ್ಯ ಸ್ಪರ್ಧೆ’ಯ ಪ್ರಶಸ್ತಿ ಪತ್ರ ವಿತರಣೆ ಹಾಗೂ ಕವನ ಸಂಕಲನ ಬಿಡುಗಡೆ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.
ರಾಜ್ಯದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಉತ್ಸಾಹದಿಂದ ಈ ಕಾವ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಗೆ ಬಂದ ಕವಿತೆಗಳು ಸಮಾಜದಲ್ಲಿನ ನೋವು, ಮಾನವೀಯ ಮೌಲ್ಯಗಳು, ಪ್ರೀತಿ, ಪ್ರಕೃತಿ ಹಾಗೂ ಸಮಕಾಲೀನ ಚಿಂತನೆಗಳನ್ನು ಒಳಗೊಂಡಿದ್ದವು ಎಂದು ಪ್ರಾಂಶುಪಾಲ ಡಾ. ಆರ್.ಎನ್.ಸುಬ್ಬರಾವ್ ಅಭಿಪ್ರಾಯಪಟ್ಟರು.
ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಯುವಕರು ಕಾವ್ಯದ ಮೂಲಕ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಸಂಪಾದಕ ಕೀರ್ತಿ ಪಿ. ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಂತೋಷ್ ಕುಮಾರ್ ಆರ್.ಎಂ. ಮಾತನಾಡಿ, ಸಾಹಿತ್ಯ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಭಾಷೆ ಸಂವೇದನೆ, ಸೃಜನಶೀಲತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಇಂತಹ ರಾಜ್ಯಮಟ್ಟದ ಸ್ಪರ್ಧೆಗಳು ಯುವ ಪ್ರತಿಭೆಗಳಿಗೆ ತಮ್ಮ ಸಾಹಿತ್ಯಿಕ ಸಾಮಥ್ರ್ಯ ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತವೆ ಎಂದರು.
ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳು ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕ ಡಾ.ಟೈಟಸ್ ಆಂಟೋ, ಐಕ್ಯುಎಸಿ ಸಂಯೋಜಕಿ ಡಾ.ಎನ್.ಅನುಷಾ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






