ಟೌನ್ಶಿಪ್ ಹೆಸರಿನಲ್ಲಿ ರೈತರನ್ನು ಬೀದಿಗೆ ತಂದು ನಿಲ್ಲಿಸುವುದು ಅಭಿವೃದ್ಧಿಯಲ್ಲ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಶಾಸಕ ದರ್ಶನ್ ಪುಟ್ಟಣ್ಣಯ್ಯ (File Photo)
ಬೆಂಗಳೂರು: ಫಲವತ್ತಾದ ಭೂಮಿಯಲ್ಲಿ ಟೌನ್ಶಿಪ್ ಅಥವಾ ಕೈಗಾರಿಕಾ ಪ್ರದೇಶದ ಹೆಸರಿನಲ್ಲಿ ದೊಡ್ಡ ಕಟ್ಟಡಗಳನ್ನು ಕಟ್ಟಿ ರೈತರನ್ನು ಬೀದಿಗೆ ತಂದು ನಿಲ್ಲಿಸುವುದು ಅಭಿವೃದ್ಧಿಯಲ್ಲ. ಈ ದಿಸೆಯಲ್ಲಿ ಅಭಿವೃದ್ಧಿಯ ಪರಿಕಲ್ಪನೆ ಬದಲಾಗಬೇಕಿದೆ. ಕೃಷಿ ಮತ್ತು ರೈತರ ಹಿತ ಕಾಯುವ ಅಭಿವೃದ್ಧಿ ಬೇಕಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಸೋಮವಾರ ಬಿಡದಿ ಟೌನ್ಶಿಪ್ ಅನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಬೈರಮಂಗಲದಲ್ಲಿ ಹಮ್ಮಿಕೊಂಡಿದ್ದ ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಹೆಸರಿನಲ್ಲಿ ರೈತರನ್ನು ಬೀದಿಗೆ ತಂದು ನಿಲ್ಲಿಸುವುದು ಬೇಡ. ರೈತರಿಗೆ ಬೇಡವಾದ ಟೌನ್ಶಿಪ್ ಅನ್ನು ಸರಕಾರ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಯೋಜನೆ ವಿರುದ್ಧ ಹೋರಾಡುತ್ತಿರುವ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಮಿತಿ ಹಾಗೂ ರೈತ ಸಂಘಗಳ ಪದಾಧಿಕಾರಿಗಳ ನಿಯೋಗವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿಗೆ ಕರೆದೊಯ್ದು ಟೌನ್ಶಿಪ್ ಕೈ ಬಿಡುವಂತೆ ಮನವಿ ಮಾಡುತ್ತೇನೆ. ಯೋಜನೆ ಕುರಿತು ರೈತ ಸಂಘ ಕೈಗೊಂಡಿರುವ ನಿರ್ಣಯಕ್ಕೆ ನನ್ನ ಸಹಮತವಿದೆ. ಇಲ್ಲಿನ ರೈತರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಅವರು ಹೇಳಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಬಿಡದಿ ಟೌನ್ಶಿಪ್ಗೆ ಶೇ.80ರಷ್ಟು ರೈತರು ಭೂಮಿ ಕೊಡಲು ಒಪ್ಪಿದ್ದಾರೆ ಎನ್ನುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಆ ರೈತರ ಹೆಸರು ಹಾಗೂ ಜಮೀನಿನ ವಿವರ ಬಿಡುಗಡೆ ಮಾಡಲಿ. ಬೇಡ ಎನ್ನುವ ಬಹುಸಂಖ್ಯಾತ ರೈತರ ಮಾಹಿತಿಯನ್ನು ನಾವು ಬಹಿರಂಗ ಪಡಿಸುತ್ತೇವೆ ಎಂದು ಸವಾಲ್ ಎಸೆದರು.
ಸಮಾವೇಶಕ್ಕೆ ವಿವಿಧ ಜಿಲ್ಲೆಗಳಿಂದ ರೈತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಬಿಡದಿಯ ಬಿಜಿಎಸ್ ವೃತ್ತದಿಂದ ಬೈರಮಂಗಲದವರೆಗೆ ಬೈಕ್ ರ್ಯಾಲಿ ನಡೆಸಿದರು. ಹೋರಾಟದಲ್ಲಿ ರೈತ ಸಂಘದ ರಾಜ್ಯ, ವಿಭಾಗ ಹಾಗೂ ಜಿಲ್ಲಾಮಟ್ಟದ ಪದಾಧಿಕಾರಿಗಳು ಹಾಗೂ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾ.ಪಂ. ರೈತರ ಭೂ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.






