ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಿ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಆಗ್ರಹ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Photo: PTI)
ಬೆಂಗಳೂರು: ಭಾರತೀಯ ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಈ ಹಿಂದೆ ಇದ್ದ ಅನುಮಾನಗಳೆಲ್ಲವೂ ಆಧಾರರಹಿತವಲ್ಲ ಎಂಬುದನ್ನು ʼಇಂಡಿಯನ್ ಎಕ್ಸ್ಪ್ರೆಸ್ʼ ವರದಿಯು ದೇಶಾದ್ಯಂತ ಸಂಚಲನ ಮೂಡಿಸಿದೆ. ರಾಷ್ಟ್ರಪತಿಯವರು ಕೂಡಲೇ ಮಧ್ಯಪ್ರವೇಶಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಿ, ವಿಚಾರಣೆ ಎದುರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಆಗ್ರಹಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ನಸೀಂ ಅಹ್ಮದ್, ಎಸ್ಐಆರ್ ಅಸಾಂವಿಧಾನಿಕ ಮತದಾನದ ಹಕ್ಕು ಕಸಿಯುವ ಕ್ರಮ ಮಾತ್ರವಲ್ಲ; ಇದನ್ನು ಕಾನೂನುಬದ್ಧ ಅಧಿಕಾರವಿಲ್ಲದೆ ಜಾರಿಗೊಳಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿತ್ತು. ಇದೀಗ ಇಂಡಿಯನ್ ಎಕ್ಸ್ಪ್ರೆಸ್ ವರದಿಯು ಸಾಬೀತುಪಡಿಸಿದೆ. ಹೀಗಾಗಿ, ಜನರ ಮತದಾನದ ಹಕ್ಕನ್ನು ಕಸಿಯಲು ಯತ್ನಿಸಿರುವ ಈ ಕ್ರಮವನ್ನು ಸೋಲಿಡಾರಿಟಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಹತ್ತು ತಿಂಗಳ ಅವಧಿಯಲ್ಲಿ ಕನಿಷ್ಠ ಹದಿನಾಲ್ಕು ಬಾರಿ, ತಮ್ಮ ತಿಳಿವಳಿಕೆಯಿಲ್ಲದೆ ಆಯೋಗದ ಹೆಸರಿನಲ್ಲಿ ಹೊರಡಿಸಲಾದ ಆದೇಶಗಳಿಗೆ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆದೇಶಗಳು ಹೊಸ ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ ಮತ್ತು ಮರುಸ್ಥಾಪನೆ, ನ್ಯಾಯಾಂಗ ಅಧಿಕಾರಿಗಳು ಮರುಸ್ಥಾಪಿಸಿದ ಮತದಾರರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳು ಹಾಗೂ ಮತದಾರರ ಪಟ್ಟಿಯ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ್ದವು. ಆಯುಕ್ತ ಸಂಧು ಅವರು ಅಂತಹ ಒಂದು ಕ್ರಮವನ್ನು “ಅನಧಿಕೃತ ಮತ್ತು ಕಾನೂನುಬಾಹಿರ” ಎಂದು ಕರೆದಿದ್ದಾರೆ. ಆಯುಕ್ತ ಜೋಶಿ, ನಿಯಮಗಳಿಗೆ ತಿದ್ದುಪಡಿ ಮಾಡದೆ Form 6ರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ದಾಖಲಿಸಿದ ನಂತರವೇ ಆ ಬದಲಾವಣೆ ಮಾಡಲಾಯಿತು; ಆಯುಕ್ತ ಸಂಧು ಕೂಡ ಅದಕ್ಕೆ ಸಮ್ಮತಿಸಿದ್ದರು. ಆ ಬದಲಾವಣೆ ಇಂದಿಗೂ ಜಾರಿಯಲ್ಲಿದೆ. ಮತದಾರರ ಪಟ್ಟಿಯ ದತ್ತಾಂಶವನ್ನು ಕಾನೂನುಬದ್ಧವಾಗಿ ನಿಯಂತ್ರಿಸುವ ಅಧಿಕಾರ ಹೊಂದಿರುವ ಶಾಸನಬದ್ಧ ಅಧಿಕಾರಿಗಳಿಂದ ದೂರವಾಗಿ, ಅದನ್ನು ಕೇಂದ್ರೀಕೃತಗೊಳಿಸಲಾಗುತ್ತಿದೆ ಎಂಬುದನ್ನೂ ಇಬ್ಬರೂ ಆಯುಕ್ತರು ದಾಖಲಿಸಿದ್ದಾರೆ. ಈ ಮಧ್ಯೆಯೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಅನುಮೋದಿಸಿರುವುದು ಯಾರ ಅಣತಿಯಂತೆ ಎಂಬುದನ್ನು ತನಿಖೆ ನಡೆಸಿದರಷ್ಟೇ ತಿಳಿಯಬಹುದು. ಹಾಗಾಗಿ, ರಾಷ್ಟ್ರಪತಿಯವರು ಕೂಡಲೇ ಮಧ್ಯಪ್ರವೇಶಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಿ, ವಿಚಾರಣೆ ಎದುರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
SIR ಪ್ರಾರಂಭವಾಗುವ ಮೊದಲು ಇದ್ದ ಮತದಾರರ ಪಟ್ಟಿಗಳನ್ನೇ ಮರುಸ್ಥಾಪಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡದಿದ್ದರೆ, ಅವರ ವಿರುದ್ಧ ತಕ್ಷಣ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಬೇಕು. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಸ್ವತಂತ್ರ ತನಿಖೆ ನಡೆಸಬೇಕು. ಅದರಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತರೂ ಸೇರಿದಂತೆ ಇತರ ಪ್ರಮುಖ ವ್ಯಕ್ತಿಗಳು ಇರಬೇಕು. 2023ರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆಯನ್ನು ರದ್ದುಗೊಳಿಸಬೇಕು. ಚುನಾವಣಾ ಆಯೋಗವು ಸ್ವತಂತ್ರವಾಗಿರಬೇಕು. ಚುನಾವಣಾ ಆಯೋಗದ ಈ ಅಕ್ರಮದ ವಿರುದ್ಧ ದೇಶದ ನಾಗರಿಕರು ಒಂದಾಗಿ ಹೋರಾಟ ನಡೆಸುವ ಮೂಲಕ ಪ್ರಜಾಪ್ರಭುತ್ವ ಅನುಸರಿಸುವ ನಮ್ಮ ದೇಶವನ್ನು ಕಾಪಾಡಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಪ್ರಕರಣೆಯಲ್ಲಿ ಆಗ್ರಹಿಸಿದೆ.






