ನಾಗಮೋಹನ್‍ದಾಸ್ ಆಯೋಗದ ವರದಿ ಜಾರಿಯಾಗಲೇಬೇಕು : ಚಿಂತಕ ಶಿವಸುಂದರ್

ಬೆಂಗಳೂರು, ಆ.16 : ಪರಿಶಿಷ್ಟರ ಒಳಮೀಸಲಾತಿ ಕಲ್ಪಿಸುವ ಸಂಬಂಧದ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ನಡೆಸಿದ ಸಮೀಕ್ಷೆ ವರದಿಯು ವೈಜ್ಞಾನಿಕವಾಗಿದೆ. ನೂನ್ಯತೆಗಳಿದ್ದಲ್ಲಿ ಚರ್ಚಿಸಿ ಸರಿಪಡಿಸಿಕೊಳ್ಳಬಹುದು. ಆದರೆ ವರದಿಯನ್ನು ಕೂಡಲೇ ಜಾರಿ ಮಾಡಬೇಕು ಎಂದು ಚಿಂತಕ ಶಿವಸುಂದರ್ ಆಗ್ರಹಿಸಿದ್ದಾರೆ.
ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಶಿಷ್ಟ ಜಾತಿಯ 101 ಸಮುದಾಯಗಳು ಹಿಂದುಳಿದಿರುವುದು ಗೊತ್ತಾಗಿದೆ. ಈ ಜಾತಿಗಳಲ್ಲಿ ಅತ್ಯಂತ ಹಿಂದುಳಿದವರು ಯಾರು? ಮುಂದುವರೆದವರು ಯಾರು? ಯಾವ ಸಮುದಾಯಕ್ಕೆ ಸರಕಾರಿ ಸೌಲಭ್ಯಗಳು ಸಿಕ್ಕಿವೆ, ಸಿಕ್ಕಿಲ್ಲ ಎನ್ನುವುದನ್ನು ಅರಿತು, ಹೆಚ್ಚಿಗೆ ಸಿಕ್ಕಿರುವರಿಗೆ ಒಂದು ಗುಂಪು, ಸಿಗದೇ ಇರುವುರಿಗೆ ಒಂದು ಗುಂಪು ಮಾಡಿದರೆ ನ್ಯಾಯ ಸಿಗುತ್ತದೆ ಎನ್ನುವುದೇ ಒಳಮೀಸಲಾತಿ ಆಶಯ ಎಂದರು.
ಪರಿಶಿಷ್ಟ ಜಾತಿಯಲ್ಲಿ ವರ್ಗೀಕರಿಸಲ್ಪಟ್ಟ ಜಾತಿಗಳು ಸಮಾಜದ ಇತರ ಜಾತಿಗಳಿಗೆ ಹೋಲಿಕೆ ಮಾಡಿದರೆ ಏಕರೂಪತೆಯನ್ನು ಹೊಂದಿದ್ದರೂ, ತಮ್ಮಗಳ ನಡುವೆ ಗಮನಾರ್ಹ ಅಸಮಾನತೆ, ಅಸಮಾನ ಹಿಂದುಳಿದಿರುವಿಕೆಯನ್ನು ಹೊಂದಿದೆಯೋ ಇಲ್ಲವೋ ಎಂಬುದು ಪ್ರಶ್ನೆಯಾಗಿದೆ. ಆಯೋಗವು ಸಾಮಾಜಿಕ ಹಿಂದುಳಿದಿರುವಿಕೆಯನ್ನು ತೀರ್ಮಾನಿಸಲು ಶೈಕ್ಷಣಿಕ, ಆರ್ಥಿಕ, ರಾಜಕೀಯ ಮಾನದಂಡಗಳನ್ನು ಅನುಸರಿಸಿದೆ ಮತ್ತು ಸರಕಾರಿ ಪ್ರಾತಿನಿಧ್ಯದ ಜಾತಿವಾರು ಪ್ರಮಾಣವನ್ನು ಅಧ್ಯಯನ ನಡೆಸಿದೆ. ಅದಕ್ಕೆ ಬೇಕಾದ ಎಲ್ಲ ಅಂಕಿ-ಅಂಶಗಳು ದಕ್ಕಿಲ್ಲವಾದರೂ, ದಕ್ಕಿರುವ ವರ್ತಮಾನದ ಅಧಿಕೃತ ಅಂಕಿಅಂಶಗಳನ್ನು ಆಧರಿಸಿದೆ ಎಂದು ಶಿವಸುಂದರ್ ಮಾಹಿತಿ ನೀಡಿದರು.
ರಾಜ್ಯದ 1.05 ಕೋಟಿ ಪರಿಶಿಷ್ಟ ಸಮುದಾಯಗಳಲ್ಲಿ ಸರಕಾರಿ ನೌಕರಿಯಲ್ಲಿರುವುದು ಕೇವಲ 1.45ಲಕ್ಷ ಮಾತ್ರ. ಅಂದರೆ ಸಮುದಾಯದ ಶೇ.1.5ರಷ್ಟು. ಉಳಿದ ಶೇ.98.5ರಷ್ಟು ಜನರ ಸಾಮಾಜಿಕ ನ್ಯಾಯದ ಪ್ರಶ್ನೆಯೇನು? ಎಲ್ಲರಿಗೂ ಸರಕಾರಿ ಕೆಲಸಗಳನ್ನು ಕೊಡಲಾಗುವುದಿಲ್ಲ. ಆದರೆ, ಘನತೆಯಿಂದ ಬದುಕಲು ಬೇಕಾದ ಭೂಮಿ ಇನ್ನಿತರ ಪಾಲಿನ ಆಸರೆಗಳು ಬೇಕಲ್ಲವೇ? ಸಮುದಾಯದ ಶೇ.99 ಜನರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದರೆ, ದೇಶದ ಸಂಪತ್ತಿನಲ್ಲಿ ಸಮಾನ ಪಾಲಿಗೆ ದುಡಿಯುವರ ರಾಜ್ಯಕ್ಕೆ ಎಲ್ಲ ದಮನಿತ ಜಾತಿ ವರ್ಗಗಳೂ ಒಗ್ಗೂಡಿ ಹೋರಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ದಮನಿತ ಸಮುದಾಯ ಮತ್ತು ನಾಡಿನ ಪ್ರಜ್ಞಾವಂತರು ನಾಗಮೋಹನ್‍ದಾಸ್ ಆಯೋಗ ವರದಿ ಜಾರಿಗೆ ಹೋರಾಡುತ್ತಲೇ ಸಾಮಾಜಿಕ ನ್ಯಾಯದ ಮುಂದಿನ ಹೋರಾಟಗಳಿಗೆ ಅಣಿಯಾಗಬೇಕಿದೆ. ಮಾದಿಗರು, ಹೊಲೆಯರು, ಲಂಬಾನಿಗಳು ಒಟ್ಟಿಗೆ ಸೇರಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು ಎಂದು ಹೋರಾಟ ಮಾಡಬೇಕು. ಇದು ಕೇವಲ ಪರಿಶಿಷ್ಟ ಜಾತಿಗಳ ಹೋರಾಟ ಮಾತ್ರವಲ್ಲ, ಈ ದೇಶದಲ್ಲಿ ಸಾಮಾಜಿಕ ನ್ಯಾಯ ಬೇಕು ಎಂದು ಕೇಳುವ ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಒಳಮೀಸಲಾತಿ ಕೈಗೆ ಸಿಕ್ಕಿದೆ, ಬಾಯಿಗೆ ಸಿಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಶಿವಸುಂದರ್ ಕರೆ ನೀಡಿದರು.
ಹೋರಾಟದಲ್ಲಿ ಒಳಮೀಸಲಾತಿ ಹೋರಾಟಗಾರರಾದ ಕರಿಯಪ್ಪ ಗುಡಿಮನಿ, ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಚಂದ್ರು ತರಹುಣಿಸೆ, ಮಂಜುನಾಥ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.







