ಅನುಮತಿ ಇಲ್ಲದೆ ವಿದೇಶ ಪ್ರವಾಸ; ಕುವೆಂಪು ವಿವಿ ಉಪಕುಲಪತಿ ಶರತ್ ಅನಂತಮೂರ್ತಿಗೆ ಶೋಕಾಸ್ ನೋಟಿಸ್

ಶಿವಮೊಗ್ಗ : ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಕಾರಣಗಳಿಗಾಗಿ ಹಲವು ಬಾರಿ ವಿದೇಶ ಪ್ರವಾಸ ಕೈಗೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಕುವೆಂಪು ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರಿಗೆ ರಾಜ್ಯಪಾಲರ ಸಚಿವಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ರಾಜ್ಯಪಾಲರ ಸಚಿವಾಲಯದಿಂದ ಸೆ.2ರಂದು ಜಾರಿಯಾಗಿರುವ ನೋಟಿಸ್‌ನಲ್ಲಿ, ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಪೂರ್ವಾನುಮತಿ ಪಡೆಯದೆ ಉಪಕುಲಪತಿಗಳು ವಿದೇಶ ಪ್ರವಾಸ ಕೈಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ನಾಲ್ಕು ಬಾರಿ ಕೆನಡಾ ಪ್ರವಾಸ: ನೋಟಿಸ್‌ನಲ್ಲಿ ಶರತ್ ಅನಂತಮೂರ್ತಿಯವರ ನಾಲ್ಕು ವಿದೇಶ ಪ್ರವಾಸಗಳ ವಿವರಗಳನ್ನು ನೀಡಲಾಗಿದೆ. ಎಲ್ಲ ಪ್ರವಾಸಗಳೂ ಕೆನಡಾಕ್ಕೆ ನಡೆದಿದ್ದು, ವೈಯಕ್ತಿಕ ಕಾರಣಗಳಿಗಾಗಿ ಕೈಗೊಳ್ಳಲಾಗಿದೆ ಎಂದು ದಾಖಲೆ ತಿಳಿಸಿದೆ.
2024ರ ಜೂ.19ರಿಂದ 2024ರ ಜು.11ರವರೆಗೆ (23 ದಿನ), 2024ರ ಡಿ.16ರಿಂದ 2025ರ ಜ.6ರವರೆಗೆ (24 ದಿನ), 2025ರ ಜು.14ರಿಂದ 2025ರ ಜು.25ರವರೆಗೆ (12 ದಿನ) ಹಾಗೂ 2026ರ ಆ.17ರಿಂದ 2026ರ ಸೆ.5ರವರೆಗೆ (20 ದಿನ) ಈ ನಾಲ್ಕೂ ಸಂದರ್ಭಗಳಲ್ಲಿ ರಾಜ್ಯಪಾಲರ ಕಚೇರಿಯಿಂದ ಪೂರ್ವಾನುಮತಿ ಪಡೆಯಲಾಗಿಲ್ಲ ಎಂದು ನೋಟಿಸ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಉಪಕುಲಪತಿ ಹುದ್ದೆಯಲ್ಲಿದ್ದುಕೊಂಡು ರಾಜ್ಯಪಾಲ ಹಾಗೂ ವಿಶ್ವ ವಿದ್ಯಾಲಯದ ಕುಲಾಧಿಪತಿಗಳ ಪೂರ್ವಾನುಮತಿ ಇಲ್ಲದೆ ವೈಯಕ್ತಿಕ ವಿದೇಶ ಪ್ರವಾಸ ಕೈಗೊಂಡಿರುವುದು ಹುದ್ದೆಗೆ ಸಂಬಂಧಿಸಿದ ಕರ್ತವ್ಯಗಳು ಮತ್ತು ನಿಗದಿತ ಮಾನದಂಡಗಳ ಪಾಲನೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ರಾಜ್ಯಪಾಲರ ಸಚಿವಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ಇಂತಹ ಪ್ರವಾಸಗಳನ್ನು ಕೈಗೊಂಡಿದ್ದಕ್ಕೆ ಏಕೆ ಸೂಕ್ತ ಕ್ರಮ ಜರುಗಿಸಬಾರದು ಎಂಬುದಕ್ಕೆ ಕಾರಣ ನೀಡುವಂತೆ ಶರತ್ ಅನಂತಮೂರ್ತಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಪ್ರತಿಯೊಂದು ಪ್ರವಾಸಕ್ಕೂ ಮುನ್ನ ಅನುಮತಿ ಪಡೆಯದಿರುವ ಪರಿಸ್ಥಿತಿಗಳೇನು ಮತ್ತು ಅನುಮತಿ ಪಡೆಯದೆ ಪ್ರವಾಸ ಕೈಗೊಂಡ ಕಾರಣಗಳೇನು ಎಂಬುದನ್ನು ವಿವರಿಸುವಂತೆ ಸೂಚಿಸಲಾಗಿದೆ.
7 ದಿನಗಳ ಗಡುವು: ನೋಟಿಸ್ ಸ್ವೀಕರಿಸಿದ ದಿನಾಂಕ ದಿಂದ 7 ದಿನಗಳೊಳಗಾಗಿ ಲಿಖಿತ ವಿವರಣೆ ಸಲ್ಲಿಸುವಂತೆ ಸೂಚಿಸಲಾಗಿದೆ. ತಮ್ಮ ವಿವರಣೆಯನ್ನು ಸಮರ್ಥಿಸುವ ಎಲ್ಲಾ ಸಂಬಂಧಿತ ದಾಖಲೆಗಳು ಹಾಗೂ ದಾಖಲೆಗಳ ಪ್ರತಿಗಳನ್ನೂ ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿದೆ.
ನಿಗದಿತ ಅವಧಿಯಲ್ಲಿ ವಿವರಣೆ ಸಲ್ಲಿಸದಿದ್ದರೆ, ತಮ್ಮ ಬಳಿ ಹೇಳಲು ಯಾವುದೇ ವಿವರಣೆ ಇಲ್ಲ ಎಂದು ಪರಿಗಣಿಸಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಹಾಗೂ ಕಾನೂನುಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲರ ಸಚಿವಾಲಯ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರ ಸಹಿಯೊಂದಿಗೆ ಈ ಶೋಕಾಸ್ ನೋಟಿಸ್ ಜಾರಿಯಾಗಿದ್ದು, ಅದನ್ನು ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿಗೆ ಕಳುಹಿಸಲಾಗಿದೆ.






