ಸಂಗಮೇಶ ಬಾದವಾಡಗಿಯ ‘ಜೋಳರಾಜನ ಕಥೆ’ ವಿಶಿಷ್ಟ ಕೃತಿ : ಸಿದ್ದರಾಮಯ್ಯ

ಬೆಂಗಳೂರು : ಕನಕದಾಸರು ‘ರಾಮಧಾನ್ಯ ಚರಿತೆ’ ಕೃತಿಯ ಮೂಲಕ ರಾಗಿಯ ಶ್ರೇಷ್ಠತೆಯನ್ನು ಪ್ರತಿಪಾದಿಸಿದಂತೆ, ಸಂಗಮೇಶ ಬಾದವಾಡಗಿ ಅವರು ‘ಜೋಳರಾಜನ ಕಥೆ’ ಕೃತಿಯ ಮೂಲಕ ಜೋಳದ ಮಹತ್ವವನ್ನು ಹಾಗೂ ಸಮಾಜದಲ್ಲಿರುವ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮಾನತೆಯ ಪ್ರಶ್ನೆಯನ್ನು ಪರಿಣಾಮಕಾರಿಯಾಗಿ ಮುಂದಿಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ರವಿವಾರ ನಗರದ ಶೇಷಾದ್ರಿಪುರಂನಲ್ಲಿ ನಡೆದ ಸಂಗಮೇಶ ಬಾದವಾಡಗಿ ಅವರ ‘ಜೋಳರಾಜನ ಕಥೆ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇದೊಂದು ವಿಶಿಷ್ಟವಾದ ಕೃತಿಯಾಗಿದ್ದು, ಇಂತಹ ಸಾಹಿತ್ಯಿಕ ಪ್ರಯತ್ನಗಳು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ ಎಂದು ನುಡಿದರು.
ಕನಕದಾಸರ ‘ರಾಮಧಾನ್ಯ ಚರಿತೆ’ಯಲ್ಲಿ ಭತ್ತ ಮತ್ತು ರಾಗಿಯ ನಡುವೆ ಯಾವುದು ಶ್ರೇಷ್ಠ ಎಂಬ ಚರ್ಚೆ ನಡೆಯುತ್ತದೆ. ಭತ್ತ ಶ್ರೀಮಂತರ ಆಹಾರವಾಗಿದ್ದರೆ, ರಾಗಿ ಶ್ರಮಿಕ ಜನರ ಆಹಾರವಾಗಿತ್ತು. ಈ ಹಿನ್ನೆಲೆಯಲ್ಲಿ ರಾಗಿಯ ಶ್ರೇಷ್ಠತೆಯನ್ನು ಕನಕದಾಸರು ಪ್ರತಿಪಾದಿಸಿದ್ದರು. ಅದೇ ಕಥೆಯಲ್ಲಿ ಜೋಳವೂ ತನ್ನ ಶ್ರೇಷ್ಠತೆಯನ್ನು ಪ್ರತಿಪಾದಿಸಿ, ಸಾಮಾನ್ಯ ಜನರ ಮತ್ತು ಬಡವರ ಆಹಾರವಾಗಿರುವ ತನ್ನ ಮಹತ್ವವನ್ನು ಗುರುತಿಸಬೇಕು ಎಂದು ವಾದಿಸುತ್ತದೆ ಎಂದರು.
ಸಂಸದ ಸಾಗರ್ ಖಂಡ್ರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹಾಗೂ ಲೇಖಕ ಸಂಗಮೇಶ ಬಾದವಾಡಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಾಂಧಿ ಭವನದ ಅಧ್ಯಕ್ಷ ವೂಡೆ ಪಿ.ಕೃಷ್ಣ, ಸಂಗಮೇಶ ಬಾದವಾಡಗಿ ಗೆಳೆಯರ ಬಳಗದ ಪ್ರೊ.ಹಿರೇಮಠ ಉಪಸ್ಥಿತರಿದ್ದರು.






