ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರಕಾರಗಳನ್ನು ಸೋಲಿಸಿದ್ದು ಸಮಾಜವಾದಿ ಪಕ್ಷ: ಅಖಿಲೇಶ್ ಯಾದವ್

ಬೆಂಗಳೂರು: ಸಮಾಜವಾದಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರಕಾರಗಳನ್ನು ಸೋಲಿಸಿತು ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯಾಧ್ಯಕ್ಷ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ರವಿವಾರ ಬೆಂಗಳೂರು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಊಹಿಸಲಾಗದ ರೀತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಥಾನಗಳನ್ನು ಕಳೆದುಕೊಂಡಿತು. ಬಿಹಾರದಲ್ಲಿ ಬಿಜೆಪಿ ತನ್ನ ಗೆಲುವನ್ನು ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಗೆಲುವಿನೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಬಿಜೆಪಿಯು ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಚುನಾವಣಾ ಫಲಿತಾಂಶಗಳನ್ನು ತನ್ನ ಪರವಾಗಿ ಕುಶಲತೆಯಿಂದ ನಿರ್ವಹಿಸುತ್ತದೆ ಎಂದು ದೂರಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರಿ ಯಂತ್ರಾಂಗವನ್ನು ದುರುಪಯೋಗಪಡಿಸಿಕೊಂಡಿದೆ. ಸಮಾಜವಾದಿ ಪಕ್ಷವು ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಸೋತಿತು. ನಾವು ಸೋಲಿನಿಂದ ಪಾಠ ಕಲಿತಿದ್ದೇವೆ. 2019ರಲ್ಲಿ ಸಮಾಜವಾದಿ ಪಕ್ಷವು ಕೇವಲ 5ಲೋಕಸಭಾ ಸ್ಥಾನಗಳನ್ನು ಗೆದ್ದಿತು. 2022ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸರಕಾರ ರಚಿಸಲು ವಿಫಲವಾಯಿತು. ಆದರೆ, ಅದು ಬಿಜೆಪಿಗೆ ಬಲವಾಗಿ ಸವಾಲು ಹಾಕಿತು. 2024ರ ಲೋಕಸಭಾ ಚುನಾವಣೆಯಲ್ಲಿ, ಸಮಾಜವಾದಿ ಪಕ್ಷವು ಬಿಜೆಪಿಯ ಡಬಲ್-ಇಂಜಿನ್ ಸರಕಾರಗಳನ್ನು ಸೋಲಿಸಿತು ಎಂದರು.
ಸಮಾಜವಾದಿ ಕರ್ನಾಟಕ ಅಧ್ಯಕ್ಷ ಎನ್.ಮಂಜಪ್ಪ ಮಾತನಾಡಿ, ಬಿಹಾರ ಚುನಾವಣಾ ಫಲಿತಾಂಶದಿಂದ ನಾವು ಗೆಲುವು-ಸೋಲು ಎರಡೂ ಪಾಠಗಳನ್ನು ಕಲಿಯಬೇಕಿದೆ. ಬಿಹಾರ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಸದಸ್ಯರು ತಾವು ಹೆಚ್ಚಿನ ಮಹಿಳಾ ಮತಗಳನ್ನು ಪಡೆದಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಇದನ್ನು ಹೇಳಿಕೊಳ್ಳಬಹುದು, ಆದರೆ ಅದು ಪ್ರತಿ ಮಹಿಳೆಗೆ 10 ಸಾವಿರ ರೂ.ಗಳನ್ನು ಯಾವಾಗ ನೀಡಿದ್ದು ಎಂದು ಸ್ಪಷ್ಟಪಡಿಸುವುದಿಲ್ಲ ಎಂದು ಟೀಕಿಸಿದರು.
ಸಮಾಜವಾದಿ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ.ತಿರುಮಲ ಮಾತನಾಡಿ, ಮಹಿಳೆಯರು ಮತ್ತು ಯುವಕರಿಗೆ ಘನತೆಯ ಜೀವನ ಮತ್ತು ಉದ್ಯೋಗಗಳನ್ನು ಒದಗಿಸಲು ಬಿಜೆಪಿ ಬಯಸುವುದಿಲ್ಲ. ಇಂದು ದೇಶದ ಲಕ್ಷಾಂತರ ವಿದ್ಯಾವಂತ ಯುವ ಜನತೆ ಪದವೀಧರರಾದರು ಅರ್ಹತೆಗೆ ಅನುಗುಣವಾಗಿ ಉದ್ಯೋಗ ಸಿಗುತ್ತಿಲ್ಲ. ಯುವ ಜನಾಂಗ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸರ್ವರಿಗೂ ಸಮಾನ ಅವಕಾಶ ಸಿಗಬೇಕು ಎಂದು ಹೇಳಿದರು.
ಈ ವೇಳೆ ಪಕ್ಷದ ಲೋಕಸಭಾ ಸದಸ್ಯ ರಾಜೀವ್ ರಾಯ್, ಗೌರವ ಅಧ್ಯಕ್ಷ ಎಸ್.ಜಿ.ಮಠ್, ಪ್ರಧಾನ ಕಾರ್ಯದರ್ಶಿ ಜಯರಾಮ್ ರೆಡ್ಡಿ, ಮಾಂತೇಶ ಪಾಟೀಲ್, ಪ್ರಶಾಂತ್ ಚಿತ್ರದುರ್ಗ, ಮಂಜುನಾಥ್ ರಾಜನಹಳ್ಳಿ, ಪ್ರತಿಭಾ, ಉಷಾ ರಾಣಿ, ಎಲ್.ರಂಗನಾಥ್, ಗೋವಿಂದ್‍ರಾಜು, ವೇಣುಗೋಪಾಲ್, ಜಗದೀಶ್, ನಾಗರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.
‘ಕಾಂಗ್ರೆಸ್ ನಮ್ಮ ಮಿತ್ರ ಪಕ್ಷ. ಸ್ನೇಹಿತ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನಾವು ಕೈಬಿಡಬಾರದು. ಇಂಡಿಯಾ ಮೈತ್ರಿಕೂಟದ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ. ಬಿಹಾರದಲ್ಲಿ ಜನರಿಗೆ ಹಣವನ್ನು ಕೊಟ್ಟು ಎನ್‍ಡಿಎ ಗೆಲುವು ಸಾಧಿಸಿದ್ದು, ಭವಿಷ್ಯದಲ್ಲಿ ನಾವು ಅದೇ ದಾರಿಯನ್ನು ಹಿಡಿಯಬೇಕೇ? ಎಂಬ ಪ್ರಶ್ನೆಯಿದೆ’
-ಅಖಿಲೇಶ್ ಯಾದವ್, ಉತ್ತರ ಪ್ರದೇಶ ಮಾಜಿ ಸಿಎಂ







