ನಾಡಿಗೆ ಪರ್ಯಾಯ ರಾಜಕಾರಣ ಬೇಕಿದೆ: ಹಂಸಲೇಖ

ಬೆಂಗಳೂರು: ಬಸವಣ್ಣನವರ ವಚನ ಕ್ರಾಂತಿಯ ಸಮಾನತೆ ಹಾಗೂ ಬುದ್ಧ ಬಯಸಿದ ಬೌದ್ಧಿಕ ಸಂಪತ್ತಿನ ಒಗ್ಗಟ್ಟು ಇಂದಿನ ಸಮಾಜಕ್ಕೆ ಅಗತ್ಯವಾಗಿದ್ದು, ನಾಡಿಗೆ ಪರ್ಯಾಯ ರಾಜಕಾರಣ, ಚಿಂತನೆಯ ಅನಿವಾರ್ಯತೆ ಎದುರಾಗಿದೆ ಎಂದು ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಗಾಂಧಿಭವನದಲ್ಲಿ ನಡೆದ ಉಪನ್ಯಾಸಕ ಡಾ.ರವಿಕುಮಾರ್ ಬಾಗಿ ಅವರ ಸಂಪಾದಕತ್ವದ `ಮಾರ್ನುಡಿ' ಮಾಸಿಕ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ನೆಲದಲ್ಲಿ ಕಪ್ಪು ನಮ್ಮ ಗುರುತು, ಕಾಯಕವೇ ವಿಳಾಸ, ಉತ್ಪನ್ನವೇ ನಮ್ಮ ಚಿನ್ನ ಎಂಬ ಕಲ್ಪನೆಯಡಿ ಕಪ್ಪು ಬಣ್ಣ ಮತ್ತು ಶ್ರಮಿಕ ವರ್ಗದ ಹೆಮ್ಮೆಯನ್ನು ಎತ್ತಿಹಿಡಿಯುವ ದೊಡ್ಡ ಕ್ರಾಂತಿಯನ್ನು ರೂಪಿಸಬೇಕು ಎಂದು ಹಂಸಲೇಖ ಕರೆ ನೀಡಿದರು.
ಸಂಸ್ಕøತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಪ್ರಸ್ತುತ ದೇಶದಲ್ಲಿ ಸಾಕ್ಷಿ ಪ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಿರುವವರ ಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಸ್ವತಂತ್ರವಾಗಿ ಅಭಿಪ್ರಾಯ ಹಂಚಿಕೊಂಡವರನ್ನು ಮತ್ತು ಮಾನವ ಹಕ್ಕುಗಳ ಪರವಾಗಿ ಧ್ವನಿ ಎತ್ತಿದವರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಜಾಮೀನು ಸಹ ಸಿಗದಂತೆ ಜೈಲಿನಲ್ಲಿಡುವ ವಾತಾವರಣ ನಿರ್ಮಾಣವಾಗಿದೆ. ದೇಶದ ಬುದ್ಧಿಜೀವಿಗಳು ಹಾಗೂ ನಾಗರಿಕ ಸಮಾಜ ಒಗ್ಗೂಡಿ ಸಹಿ ಸಂಗ್ರಹಿಸಿ ಪ್ರತಿಭಟಿಸಿದರೂ ಸರಕಾರ ಕನಿಷ್ಠ ಸ್ಪಂದನೆ ನೀಡದಂತಹ ಪರಿಸ್ಥಿತಿಗೆ ಬಂದುಬಿಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜದ ಹಿರಿಯ ನಾಯಕರು ತಮ್ಮ ಅಧಿಕಾರ ಅಥವಾ ಪದವಿಯ ವ್ಯಾಮೋಹ ತೊರೆದು ಸ್ವಇಚ್ಛೆಯಿಂದ ಮಾರ್ಗದರ್ಶನ ಸ್ಥಾನಕ್ಕೆ ಸರಿದು, ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡಬೇಕು. ದೇಶದಲ್ಲಿ ಮುಕ್ತ ಅಭಿವ್ಯಕ್ತಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿಯಲು ಹಾಗೂ ಈ ನಿಟ್ಟಿನಲ್ಲಿ ಹೋರಾಟ ಮುನ್ನಡೆಸಬಲ್ಲಂತಹ ಪ್ರೌಢ ತಲೆಮಾರಿಗೆ ಸಮಾಜದ ಚಿಂತನೆ, ಆಲೋಚನೆ ಮತ್ತು ಕಾರ್ಯಾಚರಣೆಗಳನ್ನು ದಿಟ್ಟವಾಗಿ ಮುನ್ನಡೆಸುವ ಜವಾಬ್ದಾರಿ ನೀಡಬೇಕು ಎಂದು ಡಾ.ಬಂಜಗೆರೆ ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ದಸಂಸ(ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಬೆಂಗಳೂರು ನಗರ ವಿವಿ ಕುಲಪತಿ ಡಾ.ರಮೇಶ್, ‘ಮಾರ್ನುಡಿ’ ಮಾಸಿಕದ ಸಂಪಾದಕ ಡಾ.ರವಿಕುಮಾರ್ ಬಾಗಿ ಉಪಸ್ಥಿತರಿದ್ದರು.






