ಬೆಂಗಳೂರು| ಲೈಂಗಿಕ ಸಮಸ್ಯೆಗೆ ರಸ್ತೆ ಬದಿ ಟೆಂಟ್ ನ ಔಷಧ ನಂಬಿ 48 ಲಕ್ಷ ರೂ. ಕಳೆದುಕೊಂಡು ಕಿಡ್ನಿಗೆ ಹಾನಿ ಮಾಡಿಕೊಂಡ ಟೆಕ್ಕಿ!

ಸಾಂದರ್ಭಿಕ ಚಿತ್ರ
ಬೆಂಗಳೂರು: ಲೈಂಗಿಕ ಸಮಸ್ಯೆಗೆ ರಸ್ತೆ ಬದಿ ಟೆಂಟ್ನಲ್ಲಿದ್ದ ನಕಲಿ ಗುರೂಜಿಯಿಂದ ಪರಿಹಾರ ಪಡೆಯಲು ಹೋದ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ವಂಚನೆ ಮಾತ್ರವಲ್ಲದೆ, ತೀವ್ರ ಅನಾರೋಗ್ಯಕ್ಕೀಡಾದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ನಕಲಿ ಗುರೂಜಿಯ ಮಾತು ನಂಬಿ 48 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಲ್ಲದೆ, ತೀವ್ರ ಅನಾರೋಗ್ಯದ ಸಮಸ್ಯೆಗೆ ತುತ್ತಾಗಿರುವುದಾಗಿ ಸಾಫ್ಟ್ ವೇರ್ ಉದ್ಯೋಗಿಯು ನಗರದ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ವಿಜಯ್ ಗೂರೂಜಿ, ವಿಜಯಲಕ್ಷ್ಮೀ ಆಯುರ್ವೇದಿಕ್ ಮಳಿಗೆ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿದ್ದ ದೂರುದಾರ ವ್ಯಕ್ತಿಗೆ 2023ರಲ್ಲಿ ವಿವಾಹವಾಗಿತ್ತು. ಲೈಂಗಿಕ ಸಮಸ್ಯೆ ಉಂಟಾಗುತ್ತಿದ್ದರಿಂದ ಕೆಂಗೇರಿಯಲ್ಲಿನ ಆಸ್ಪತ್ರೆಯಲ್ಲಿ ದೂರುದಾರ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅದೇ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ಟೆಂಟ್ವೊಂದರ ಹೊರಗಡೆ ‘ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ’ ಎಂದು ಹಾಕಲಾಗಿದ್ದ ಬೋರ್ಡ್ ನೋಡಿ ದೂರುದಾರ ವ್ಯಕ್ತಿ ಅವರನ್ನು ಸಂಪರ್ಕಿಸಿದ್ದರು.
ಆಗ ಅಲ್ಲಿದ್ದ ವಿಜಯ್ ಗುರೂಜಿ ಎಂಬಾತ ಯಶವಂತಪುರದ ಆಯುರ್ವೇದಿಕ್ ಔಷಧದ ಅಂಗಡಿಯೊಂದರಲ್ಲಿ 1.60 ಲಕ್ಷ ರೂ. ನೀಡಿ ಒಂದು ಗ್ರಾಂ ತೂಕದ ದೇವರಾಜ್ ಬೂಟಿ ಹೆಸರಿನ ಔಷಧಿಯನ್ನು ಖರೀದಿಸಲು ಹೇಳಿದ್ದ ಮತ್ತು ಔಷಧ ಖರೀದಿಸಲು ಒಬ್ಬರೇ ಹೋಗಬೇಕು ಹಾಗೂ ಕ್ಯಾಶ್ ರೂಪದಲ್ಲಿ ಪಾವತಿಸಿದರಷ್ಟೇ ಔಷಧಿಯ ಶಕ್ತಿ ಫಲಿಸುತ್ತದೆ ಎಂದು ಷರತ್ತು ವಿಧಿಸಿದ್ದ.
ಅದರಂತೆ ದೂರುದಾರ ವ್ಯಕ್ತಿ ದೇವರಾಜ್ ಬೂಟಿ ಎಂಬ ಔಷಧಿ ಖರೀದಿಸಿ ತಂದು ವಿಜಯ್ ಗುರೂಜಿಯನ್ನು ಭೇಟಿಯಾಗಿದ್ದರು. ಇದಾದ ಬಳಿಕ ಬೇರೆ ಬೇರೆ ಔಷಧ, ತೈಲದ ಹೆಸರಿನಲ್ಲಿ ನಕಲಿ ಗುರೂಜಿ ಹಣ ಪೀಕಿದ್ದ. ಖರೀದಿಗೆ ಹಣವಿಲ್ಲವೆಂದಾಗ ‘ಇಲ್ಲಿಯವರೆಗೆ ನೀಡಿರುವ ಚಿಕಿತ್ಸೆ ಫಲಕಾರಿಯಾಗುವುದಿಲ್ಲವೆಂದು’ ಹೆದರಿಸಿದ್ದ ಎಂದು ಆರೋಪಿಸಲಾಗಿದೆ.
ಇದರಿಂದ ಆತಂಕಗೊಂಡ ದೂರುದಾರ ಸಾಲ ಮಾಡಿ ಒಟ್ಟು 48 ಲಕ್ಷ ಹಣವನ್ನು ವಿಜಯ್ ಗುರೂಜಿಗೆ ನೀಡಿದ್ದರು. ಇದರಿಂದ ಯಾವುದೇ ಪ್ರಯೋಜನವಾಗದಿದ್ದಾಗ, ಇನ್ನೂ ಹೆಚ್ಚು ಚಿಕಿತ್ಸೆಯ ಅಗತ್ಯವಿದೆ, ಇಲ್ಲದಿದ್ದರೆ ಜೀವಕ್ಕೆ ತೊಂದರೆಯಾಗುತ್ತದೆ ಎಂದು ಪ್ರತಿ ದಿನ ನಕಲಿ ಗುರೂಜಿ ಬೆದರಿಕೆ ಹಾಕಲಾರಂಭಿಸಿದ್ದ. ಈ ನಡುವೆ ದೂರುದಾರ ತಮ್ಮ ರಕ್ತವನ್ನು ತಪಾಸಣೆ ಮಾಡಿಸಿದಾಗ ಕಿಡ್ನಿಗೆ ಹಾನಿಯಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹಾಗೂ ರಸ್ತೆ ಪಕ್ಕದಲ್ಲಿರುವ ನಕಲಿ ಆಯುರ್ವೇದಿಕ್ ಟೆಂಟ್ಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ತಿಳಿಸಿದ್ದಾರೆ.







