ದೈವ ಚಾಕರಿಯನ್ನು ಉಮೇಶ್ ಪಂಬದ ನಿಷ್ಠೆಯಿಂದ ಮಾಡುತ್ತಿದ್ದಾರೆ: ಕೆ.ವಿ.ಪ್ರಭಾಕರ್

ರಿಷಬ್ ಶೆಟ್ಟಿ|ಕೆ ವಿ ಪ್ರಭಾಕರ್
ಮಂಗಳೂರು : ಜಾತಿ, ಧರ್ಮದ ಗಡಿಯೊಳಗೆ ಸಿಲುಕಿ ಮನುಷ್ಯರು ದ್ವೀಪವಾಗುತ್ತಿರುವ ಈ ತಲ್ಲಣದ ಹೊತ್ತಿನಲ್ಲಿ ‘ದೈವವೆಂಬ ದೀವಿಗೆ’ಯು ಎಲ್ಲರನ್ನು ಒಗ್ಗೂಡಿಸಿ, ಎಲ್ಲರೊಳಗೂ ಬೆಳಕು ತುಂಬಬಲ್ಲದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಉಮೇಶ್ ಪಂಬದ ಸನ್ಮಾನ ಸಮಿತಿ, ಜಾರಪ್ಪ ಪಂಬದ ಸಂಸ್ಮರಣಾ ಸಮಿತಿ ಮತ್ತು ಅರಸು ಧರ್ಮ ಜಾರಂದಾಯ, ಬಂಟ ಮತ್ತು ವಾರಾಹಿ ದೇವಸ್ಥಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಉಮೇಶ್ ಪಂಬದ ಮತ್ತಿತರರನ್ನು ಸನ್ಮಾನಿಸಿ ಮಾತನಾಡಿದರು.
ಬದುಕು ನೀಡುವ ಸಂಕಟ, ನೋವಿಗೆ ದೈವದ ನುಡಿಗಳು ಮದ್ದಾಗುತ್ತವೆ ಎಂಬುದು ಸದಾ ಕಾಲದ ನಂಬಿಕೆಯೇ ಆಗಿದೆ ಎಂದರು.
ಸರ್ಕಾರಿ ಕೆಲಸವನ್ನು ಬಿಟ್ಟು ಉಮೇಶ್ ಪಂಬದ ಅವರು ದೈವದ ಚಾಕರಿಗೆ ನಿಂತು, ದೈವವಾಡುವ ನುಡಿಗಳನ್ನಾಡುತ್ತಲೇ ಪರೋಕ್ಷವಾಗಿ ಹಲವು ಕುಟುಂಬಗಳಿಗೆ ಸಂತೈಸುವ ಶಕ್ತಿಯಾಗಿದ್ದಾರೆ. ಇಂಥವರನ್ನು ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಗುರುತಿಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಔಚಿತ್ಯಪೂರ್ಣ ಸಂಗತಿ ಎಂದರು.
ದೈವವೆಂಬುದು ಕುಟುಂಬದ ಬೆನ್ನಿಗೆ ಸದಾ ನಿಂತು ಸಂತೈಸುವ, ಮುನ್ನಡೆಸುವ ಶಕ್ತಿ. ಇಂಥ ‘ಮಾಯಕ’ ಶಕ್ತಿಯನ್ನು ಪಡೆದು, ಅದನ್ನು ಆರಾಧಿಸುತ್ತಿರುವುದು ದಕ್ಷಿಣದ ಕನ್ನಡದ ಹಿರಿಮೆಗಳಲ್ಲಿ ಒಂದಾಗಿದೆ ಎಂದರು.
ಇಂದಿಗೂ ದೈವದ ನುಡಿಯನ್ನು ಅಲ್ಲಗಳೆದು ಮುಂದಡಿ ಇಟ್ಟವರಿಗೆ ಉಳಿಗಾಲವಿಲ್ಲ ಎಂಬುದು ಈ ಭಾಗದಲ್ಲಿ ಜನಜನಿತ. ಸತ್ಯ, ನ್ಯಾಯ ಹಾಗೂ ಸಮಾನತೆಗೆ ಕಟ್ಟಿಬದ್ಧವಾಗಿರುವ ದೈವಗಳು ನಮ್ಮೊಳಗಿನ ಚೇತನಗಳು. ಈ ಚೇತನಗಳನ್ನು ಎಂದಾದರೂ ಮೀರಿ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜಾರಂದಾಯ ದೈವದ ನೇಮ ಕಟ್ಟುವ ಹಾಗೂ ಇತರ ಪ್ರಮುಖ ದೈವಸ್ಥಾನಗಳಲ್ಲಿ ದೈವ ಚಾಕರಿಯನ್ನು ಉಮೇಶ್ ಪಂಬದ ಅವರು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದಾರೆ. ಅವರ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಇಲ್ಲಿ ಸೇರಿರುವ ಜನರೇ ಸಾಕ್ಷಿ.
ಆಧುನೀಕರಣದ ಹಲವು ಒತ್ತಡಗಳ ನಡುವೆ ದೈವ ನರ್ತನವೆಂಬ ಕಲೆಗೆ ಯಾವ ಆಪತ್ತು ಒದಗಿ ಬಾರದಂತೆ ನೋಡಿಕೊಳ್ಳಬೇಕಿದೆ. ನೇಮ, ಕೋಲಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮನಸ್ಸುಗಳಿರುವಾಗ, ದೈವ ನರ್ತಕರ ಬದುಕನ್ನು ಒಪ್ಪಗೊಳಿಸುವ ಕಾರ್ಯಕ್ಕೂ ಇಂಥ ಸಹೃದಯರ ನೆರವು ಪಡೆಯುವ ಕೆಲಸ ಆಗಬೇಕಿದೆ ಎಂದು ಕರೆ ನೀಡಿದರು.
ಪಂಬದ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ರಿಷಬ್ ಶೆಟ್ಟಿ ನನಗೆ ಆತ್ಮೀಯರು. ಕಾಂತಾರ ಸಿನಿಮಾ ಮೂಲಕ ದೈವಾಚಾರಣೆಯತ್ತ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿರುವ ಶ್ರೇಯ ರಿಷಭ್ ಶೆಟ್ಟಿ ಅವರಿಗೆ ಸಲ್ಲುತ್ತದೆ. ಹೀಗಾಗಲೂ ದೈವದ ಆಶೀರ್ವಾದವೇ ಕಾರಣವೆಂದು ರಿಷಭ್ ಹೇಳುತ್ತಾರೆ ಎಂದೂ ಗೊತ್ತಿದೆ. ದೈವ ಮತ್ತು ಶ್ರೀಸಾಮಾನ್ಯನಿಗಿರುವ ಸಂಬಂಧ, ತಾಯಿ ಹಾಗೂ ಮಗುವಿನ ಸಂಬಂಧದಂತೆ. ಇದು ಈ ತುಳುನಾಡಿನ ವಿಶೇಷತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.







