ವಿಜಯ್ ಮಲ್ಯ ಐಷಾರಾಮಿ ಜೀವನಶೈಲಿಯಿಂದಲೇ ಸಾಲ ವಸೂಲಾತಿ ಪ್ರಕ್ರಿಯೆಗೆ ಅಡ್ಡಿ; ಹೈಕೋರ್ಟ್ ಅಭಿಪ್ರಾಯ

ವಿಜಯ್ ಮಲ್ಯ (Photo Credit | PTI)
ಬೆಂಗಳೂರು : ನಿಷ್ಕ್ರಿಯಗೊಂಡಿರುವ ಕಿಂಗ್ಫಿಷರ್ ಏರ್ಲೈನ್ಸ್ಗೆ ಸಂಬಂಧಿಸಿದ ಸಾಲ ವಸೂಲಾತಿ ಪ್ರಕ್ರಿಯೆ ಇತ್ಯರ್ಥಗೊಳ್ಳಲು ಅದರ ಮಾಜಿ ಪ್ರವರ್ತಕ ವಿಜಯ್ ಮಲ್ಯ ಅವರ 'ಐಷಾರಾಮಿ ಜೀವನಶೈಲಿ' ಅಡ್ಡಿಯಾಗುತ್ತಿರುವಂತೆ ಕಾಣುತ್ತಿದೆ ಎಂದು ಹೈಕೋರ್ಟ್ ಬುಧವಾರ (ಅಕ್ಟೋಬರ್ 14) ಅಭಿಪ್ರಾಯಪಟ್ಟಿದೆ.
ಸಾಲಕ್ಕೆ ಸಂಬಂಧಿಸಿದಂತೆ ಅಡಮಾನ ಇಡಲಾಗಿದ್ದ ಯುನೈಟೆಡ್ ಬ್ರೆವರೀಸ್ ಲಿಮಿಟೆಡ್ನಲ್ಲಿನ (ಯುಬಿಎಲ್) ವಿಜಯ್ ಮಲ್ಯ ಅವರ ಷೇರುಗಳ ಮೇಲಿನ ಹಕ್ಕು ಪ್ರತಿಪಾದನೆಗೆ ಸಂಬಂಧಿಸಿದ ವಿವಾದದಲ್ಲಿ ಡಿಯಾಜಿಯೋ ಹೋಲ್ಡಿಂಗ್ಸ್ ನೆದರ್ಲ್ಯಾಂಡ್ಸ್ ಬಿವಿಗೆ ಪರಿಹಾರ ಒದಗಿಸುವ ವೇಳೆ ನ್ಯಾಯಮೂರ್ತಿ ಡಿ.ಕೆ ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮೇಲಿನಂತೆ ಹೇಳಿದೆ.
ಈ ಷೇರುಗಳ ಮೇಲಿನ ಬ್ಯಾಂಕ್ಗಳ ಹಕ್ಕಿಗಿಂತ ಡಿಯಾಜಿಯೊ ಕಂಪನಿಯ ಹಕ್ಕು ಹೆಚ್ಚಿನ ಆದ್ಯತೆ ಹೊಂದಿದೆ ಎಂದು ತೀರ್ಪು ನೀಡಿರುವ ನ್ಯಾಯಾಲಯ, ಕಿಂಗ್ಫಿಷರ್ ಏರ್ಲೈನ್ಸ್ಗೆ ನೀಡಲಾಗಿದ್ದ 6,203 ಕೋಟಿ ರೂ. ಸಾಲಕ್ಕೆ ಪ್ರತಿಯಾಗಿ ಬ್ಯಾಂಕ್ಗಳು ಈಗಾಗಲೇ 14,131.6 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ವಸೂಲಿ ಮಾಡಿವೆ ಎಂದು ಹೇಳಿದೆ. ಆದ್ದರಿಂದ, ಯುನೈಟೆಡ್ ಬ್ರೆವರೀಸ್ ಲಿಮಿಟೆಡ್ನ ಷೇರುಗಳ ಮೇಲೂ ಹಕ್ಕು ಪ್ರತಿಪಾದಿಸಲು ಬ್ಯಾಂಕ್ಗಳು ಯಾವುದೇ ಸಮರ್ಥನೆ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ (ಎಸ್ಸಿಬಿ) ಪರವಾಗಿ 2013ರಲ್ಲಿ ಸೃಷ್ಟಿಸಲಾದ ಷೇರುಗಳ ಅಡಮಾನ ಹಕ್ಕು, 2010ರ ಒಪ್ಪಂದದಡಿ ಬ್ಯಾಂಕ್ಗಳ ಒಕ್ಕೂಟ ಪ್ರತಿಪಾದಿಸಿದ್ದ ಹಕ್ಕಿಗಿಂತ ಆದ್ಯತೆಯನ್ನು ಹೊಂದಿದೆ ಎಂದು ಹೈಕೋರ್ಟ್ ತೀರ್ಪುನಲ್ಲಿ ಹೇಳಿದೆ.
ಬ್ಯಾಂಕ್ಗಳೊಂದಿಗಿನ ಮಾಸ್ಟರ್ ಡೆಟ್ ರೀಕಾಸ್ಟ್ ಒಪ್ಪಂದಕ್ಕೆ ಸಿದ್ಧಾರ್ಥ್ ಮಲ್ಯ ಪಕ್ಷಕಾರರಾಗಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿಜಯ್ ಮಲ್ಯ ಅವರ ವೈಯಕ್ತಿಕ ಖಾತ್ರಿಯೊಂದೇ ಜಂಟಿಯಾಗಿ ಹೊಂದಿದ್ದ ಷೇರುಗಳ ಮೇಲೆ ಸ್ವಾಮ್ಯಾಧಾರಿತ ಹಕ್ಕನ್ನು ಸೃಷ್ಟಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ಡಿಯಾಜಿಯೋ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿರುವ ಹೈಕೋರ್ಟ್, ಸಾಲ ವಸೂಲಾತಿ ನ್ಯಾಯಮಂಡಳಿ (ಡಿಆರ್ಟಿ) ಮತ್ತು ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ (ಡಿಆರ್ಎಟಿ) ನೀಡಿದ್ದ ಆದೇಶಗಳನ್ನು ರದ್ದುಪಡಿಸಿದೆ.
ಬ್ಯಾಂಕ್ಗಳೊಂದಿಗಿನ ಸಾಲದ ವಿವಾದ ಇನ್ನೂ ಇತ್ಯರ್ಥಗೊಳ್ಳದೆ ಉಳಿಯಲು ವಿಜಯ್ ಮಲ್ಯ ಅವರ ಅತಿರೇಕದ ಜೀವನಶೈಲಿಯೇ ಕಾರಣವಾಗಿರುವಂತೆ ಕಾಣುತ್ತಿದೆ. ನಿಷ್ಕ್ರಿಯಗೊಂಡಿರುವ ಕಿಂಗ್ಫಿಷರ್ ಏರ್ಲೈನ್ಸ್ ಲಿಮಿಟೆಡ್ಗೆ ನೀಡಲಾದ 6,203 ಕೋಟಿ ರೂ. ಸಾಲಕ್ಕೆ ಸಂಬಂಧಿಸಿದಂತೆ ಬ್ಯಾಂಕ್ಗಳ ಒಕ್ಕೂಟದ ಹಕ್ಕುಗಳಿಗೆ ಅಂತಿಮ ಇತ್ಯರ್ಥ ನೀಡುವ ಪ್ರಕ್ರಿಯೆಗೆ ಡಾ. ವಿಜಯ್ ಮಲ್ಯ ಅವರ ಐಷಾರಾಮಿ ಜೀವನಶೈಲಿ, ಅತಿಯಾದ ವೈಯಕ್ತಿಕ ಭೋಗ ಮತ್ತು ವೈಯಕ್ತಿಕ ಪ್ರತಿಷ್ಠೆಯ ವ್ಯಾಮೋಹ ಅಡ್ಡಿಯಾಗುತ್ತಿವೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಹೇಳಿದೆ.
ಸಾಲ ವಸೂಲಾತಿ ಪ್ರಕ್ರಿಯೆಗೆ ಈಗ ಅಂತಿಮ ತೆರೆ ಎಳೆಯುವುದು ಬ್ಯಾಂಕ್ಗಳ ಒಕ್ಕೂಟ ಮತ್ತು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. 6,203 ಕೋಟಿ ರೂ. ಸಾಲಕ್ಕೆ ಪ್ರತಿಯಾಗಿ 14,131.6 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಬ್ಯಾಂಕ್ಗಳ ಒಕ್ಕೂಟಕ್ಕೆ ಮರಳಿಸಿರುವಾಗ, ಈ ಪ್ರಕ್ರಿಯೆಗಳಿಗೆ ಇತಿಶ್ರೀ ಹಾಡುವುದು ಬ್ಯಾಂಕ್ಗಳ ಒಕ್ಕೂಟ ಮತ್ತು ಭಾರತ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ವಿಜಯ್ ಮಲ್ಯ ಅವರ ಉದ್ಯಮ ಸಾಮ್ರಾಜ್ಯದ ಪತನದ ಕುರಿತು ಅಭಿಪ್ರಾಯ ದಾಖಲಿಸುವ ಮೂಲಕ ನ್ಯಾಯಾಲಯ ತೀರ್ಪು ಆರಂಭಿಸಿದ್ದು, ಮಲ್ಯ ಅವರ ಅತಿಯಾದ ವೈಯಕ್ತಿಕ ಭೋಗ, ವೈಯಕ್ತಿಕ ಪ್ರತಿಷ್ಠೆಯ ವ್ಯಾಮೋಹ, ಅಹಂಕಾರ ಮತ್ತು ಅಜಾಗರೂಕ ವರ್ತನೆಗಳು ಅವರ ಉದ್ಯಮ ಸಾಮ್ರಾಜ್ಯದ ಪತನಕ್ಕೆ ಕಾರಣವಾಗಿವೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಐಷಾರಾಮಿ ಜೀವನಶೈಲಿ ಮತ್ತು ಅತಿಯಾದ ವೈಯಕ್ತಿಕ ಭೋಗದಿಂದಾಗಿ ವಿಜಯ್ ಮಲ್ಯ ಅವರ ಉದ್ಯಮ ಸಾಮ್ರಾಜ್ಯ ಕುಸಿದಿರುವುದು, ಇತಿಹಾಸದಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುವ ಕಾರ್ಪೊರೇಟ್ ಜಗತ್ತಿನ ಕಥನಗಳಲ್ಲಿ ಒಂದಾಗಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಕಾರ್ಯಾಚರಣೆಯಲ್ಲಿನ ಶ್ರೇಷ್ಠತೆ ಮತ್ತು ಆರ್ಥಿಕ ಶಿಸ್ತಿಗೆ ಆದ್ಯತೆ ನೀಡುವ ಬದಲು ವೈಯಕ್ತಿಕ ಪ್ರತಿಷ್ಠೆ, ಮಿತಿಮೀರಿದ ಅಹಂಕಾರ ಹಾಗೂ ಭೋಗವಿಲಾಸಕ್ಕೆ ಆದ್ಯತೆ ನೀಡಿದಾಗ, ದಶಕಗಳ ಪರಿಶ್ರಮದಿಂದ ಗಳಿಸಿದ ಯಶಸ್ಸು ಕೂಡ ಕ್ಷಣಾರ್ಧದಲ್ಲಿ ಕರಗಿಹೋಗಬಹುದು. ಶಿಸ್ತುಬದ್ಧ ಪರಿಶ್ರಮದ ಸ್ಥಾನವನ್ನು ವ್ಯಕ್ತಿಪೂಜೆ ಮತ್ತು ಅಹಂಕಾರ ಆಕ್ರಮಿಸಿಕೊಂಡಾಗ, ಅದರ ಅಂತಿಮ ಪರಿಣಾಮ ದಿವಾಳಿತನ ಮತ್ತು ಸರ್ವನಾಶವಾಗಬಹುದು ಎಂದು ಪೀಠ ಹೇಳಿದೆ.
ಮದ್ಯದ ಉದ್ಯಮದಲ್ಲಿ ವಿಜಯ್ ಮಲ್ಯ ಅವರ ಏಳಿಗೆ ಮತ್ತು ಅವರ ಉದ್ಯಮ ಸಾಮ್ರಾಜ್ಯದ ವಿಸ್ತರಣೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಮಲ್ಯ 'ಕಿಂಗ್ ಆಫ್ ಗುಡ್ ಟೈಮ್ಸ್' ಎಂದೇ ಪ್ರಸಿದ್ಧರಾಗಿದ್ದರು. ಅವರ ಐಷಾರಾಮಿ ಜೀವನಶೈಲಿಯು ಅವರು ನಿರ್ಮಿಸಿದ ಬ್ರ್ಯಾಂಡ್ನ ಅವಿಭಾಜ್ಯ ಗುರುತಾಗಿ ಬೆಳೆದಿತ್ತು. ಕಿಂಗ್ಫಿಷರ್ ಏರ್ಲೈನ್ಸ್ಗಾಗಿ ವಿಜಯ್ ಮಲ್ಯ ಮಾಡಿದ ಸಾಲದ ಮೇಲಿನ ಹೂಡಿಕೆ ಕೊನೆಗೆ ವಿಫಲವಾಯಿತು. ಇದರಿಂದ, ಅವರು ಪರಾರಿಯಾದ ಆರ್ಥಿಕ ಅಪರಾಧಿ ಎನಿಸಿಕೊಂಡರು ಎಂದು ನ್ಯಾಯಾಲಯ ಹೇಳಿದೆ. ವಿಜಯ್ ಮಲ್ಯ ಅವರ ಉದಾಹರಣೆಯು ಒಂದು ಉದ್ಯಮ ಸಾಮ್ರಾಜ್ಯವನ್ನು ಕಟ್ಟಲು ದಶಕಗಳ ಪರಿಶ್ರಮ ಬೇಕು, ಆದರೆ ಅತಿಯಾದ ಐಷಾರಾಮಿ ಜೀವನ ಮತ್ತು ದುಂದುವೆಚ್ಚದಿಂದ ಅದನ್ನು ನಾಶಪಡಿಸಲು ಕೆಲವೇ ವರ್ಷಗಳು ಸಾಕು ಎಂಬುದನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?
ಯುಬಿಎಲ್ನಲ್ಲಿ ವಿಜಯ್ ಮಲ್ಯ ವೈಯಕ್ತಿಕವಾಗಿ ಹೊಂದಿದ್ದ ಷೇರುಗಳು ಹಾಗೂ ಅವರ ಪುತ್ರ ಸಿದ್ಧಾರ್ಥ ಮಲ್ಯ ಅವರೊಂದಿಗೆ ಜಂಟಿಯಾಗಿ ಹೊಂದಿದ್ದ ಷೇರುಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಮಲ್ಯ ಅವರ ವಿದೇಶಿ ಕಂಪನಿಯಾದ ವ್ಯಾಟ್ಸನ್ ಲಿಮಿಟೆಡ್ಗೆ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ 2013ರ ಜುಲೈನಲ್ಲಿ 135 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 806.6 ಕೋಟಿ ರೂ.) ಸಾಲ ನೀಡಿತ್ತು. ಈ ಸಾಲಕ್ಕೆ ಭದ್ರತೆಯಾಗಿ ಯುಬಿಎಲ್ ಷೇರುಗಳನ್ನು ಅಡಮಾನ ಇಡಲಾಗಿತ್ತು. ಡಿಯಾಜಿಯೋ ಈ ಸಾಲಕ್ಕೆ ಖಾತರಿ ನೀಡಿತ್ತು.
ವ್ಯಾಟ್ಸನ್ ಲಿಮಿಟೆಡ್ ಸಾಲ ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ, 2016ರ ಜನವರಿಯಲ್ಲಿ ಡಿಯಾಜಿಯೋ ಬ್ಯಾಂಕ್ಗೆ 140.97 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹933 ಕೋಟಿ) ಪಾವತಿಸಿತ್ತು. ಈ ಮೂಲಕ ಎಸ್ಸಿಬಿಯ ಸ್ಥಾನಕ್ಕೆ ತಾನು ಬಂದಿರುವುದಾಗಿ ಡಿಯಾಜಿಯೋ ಪ್ರತಿಪಾದಿಸಿತ್ತು. ಆದರೆ, ಕಿಂಗ್ಫಿಷರ್ ಏರ್ಲೈನ್ಸ್ ವಿರುದ್ಧದ ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಬ್ಯಾಂಕ್ಗಳ ಒಕ್ಕೂಟವು ಕೆಲವು ಮಧ್ಯಂತರ ಆದೇಶಗಳನ್ನು ಪಡೆದುಕೊಂಡಿದ್ದವು. ಈ ಆದೇಶಗಳ ಪರಿಣಾಮವಾಗಿ ಯುಬಿಎಲ್ ಷೇರುಗಳ ಮೇಲಿನ ವಹಿವಾಟಿಗೆ ನಿರ್ಬಂಧ ಉಂಟಾಗಿತ್ತು.
ಕಿಂಗ್ಫಿಷರ್ ಏರ್ಲೈನ್ಸ್ ತೀರಿಸಬೇಕಿದ್ದ 6,203 ಕೋಟಿ ರೂ. ಸಾಲ ವಸೂಲಿ ಮಾಡಲು ಯುಬಿಎಲ್ ಷೇರುಗಳನ್ನು ಬಳಸಿಕೊಳ್ಳಬಹುದು ಎಂದು ಬ್ಯಾಂಕ್ಗಳ ಒಕ್ಕೂಟ ವಾದಿಸಿತ್ತು. ಅಲ್ಲದೆ, ಷೇರುಗಳನ್ನು ಡಿಯಾಜಿಯೋ ಪರವಾಗಿ ಅಡಮಾನ ಇಟ್ಟಿರುವುದು ತಮ್ಮ ಹಕ್ಕುಗಳಿಗೆ ವಿರುದ್ಧವಾಗಿ ಕಾನೂನುಬದ್ಧವಾಗಿಲ್ಲ ಎಂದು ಬ್ಯಾಂಕ್ಗಳು ಪ್ರತಿಪಾದಿಸಿದ್ದವು.
2010ರ ಡಿಸೆಂಬರ್ 21ರಂದು ಮಾಡಿಕೊಂಡಿದ್ದ ಮಾಸ್ಟರ್ ಡೆಟ್ ರೀಕಾಸ್ಟ್ ಒಪ್ಪಂದದಡಿ ವಿಜಯ್ ಮಲ್ಯ ಮತ್ತು ಯುಬಿಎಲ್ ಸಾಲ ಮರುಪಾವತಿಗೆ ಖಾತರಿ ನೀಡಿದ್ದರು.
ಡಿಆರ್ಟಿ ಮತ್ತು ಡಿಆರ್ಎಟಿ ಡಿಯಾಜಿಯೋ ವಿರುದ್ಧ ತೀರ್ಪು ನೀಡಿದ್ದರಿಂದ, ಕಂಪನಿಯು ಪರಿಹಾರ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.






