ವಿಷ್ಣುವರ್ಧನ್ ಸಮಾಧಿ ತೆರವು: ಅಭಿಮಾನಿಗಳ ಆಕ್ರೋಶ

ಬೆಂಗಳೂರು: ಹೈಕೋರ್ಟ್ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿಯನ್ನು ಆ.7ರಂದು ತೆರವುಗೊಳಿಸಿದ್ದು, ಇದರಿಂದ ಆಕ್ರೋಶಗೊಂಡ ವಿಷ್ಣು ಅಭಿಮಾನಿಗಳು ಸರಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸ್ಮಾರಕ ಸಂಪೂರ್ಣ ನೆಲಸಮ ಆಗಿದ್ದು, ಅಭಿಮಾನ್ ಸ್ಟುಡಿಯೋ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಖಾಕಿ ಬಂದೋಬಸ್ತ್ ಮಾಡಲಾಗಿದೆ. 200 ಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನಡೆಸಲಾಗಿತ್ತು. ನಂತರದಲ್ಲಿ ವಿಷ್ಣು ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕವಾಗಿ ಘೋಷಿಸಬೇಕೆಂಬ ಹೋರಾಟ ನಡೆಯುತ್ತಲೇ ಇತ್ತು.
ಕರ್ನಾಟಕ ವಿಕಾಸ ರಂಗ ತೀವ್ರ ಖಂಡನೆ:
ನ್ಯಾಯಾಲಯದ ತೀರ್ಪಿನ ನೆಪದಲ್ಲಿ ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿರುವುದು, ವಿಷ್ಣುವರ್ಧನ್ ಅವರಿಗೆ ಮಾತ್ರವಲ್ಲ, ಕನ್ನಡ ಚಿತ್ರ ರಸಿಕರಿಗೆ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಾಡಿರುವ ಅಪಮಾನವಾಗಿದೆ ಎಂದು ಕರ್ನಾಟಕ ವಿಕಾಸ ರಂಗ ಖಂಡಿಸಿದೆ.
ಕರ್ನಾಟಕ ವಿಕಾಸ ರಂಗದ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಪ್ರಕಟನೆ ಹೊರಡಿಸಿದ್ದು, ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್ ನಿಧನರಾದ ಸಂದರ್ಭದಲ್ಲಿ ಸರಕಾರ ಅವರ ಅಂತ್ಯ ಸಂಸ್ಕಾರವನ್ನು ನಡೆಸಲು ಉತ್ತರಹಳ್ಳಿ ಅಭಿಮಾನ ಸ್ಟುಡಿಯೋದಲ್ಲಿ ಜಾಗ ನೀಡಿದ್ದು, ಮುಂದೆ ಈ ಸ್ಥಳ ವಿವಾದಕ್ಕೆ ತಿರುಗಿದ್ದು ದುರದೃಷ್ಟಕರ ಎಂದಿದ್ದಾರೆ.
ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಮಧ್ಯಭಾಗದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಿಸಿ ವಿಷ್ಣುವರ್ಧನ್ ಅವರಿಗೆ ಗೌರವ ಸಲ್ಲಿಸಬೇಕು. ಮೈಸೂರಿನ ಸಮೀಪ ಸರಕಾರ ಸ್ಥಳ ನೀಡಿರುವುದು ಅವರ ಕುಟುಂಬದ ಆಸ್ತಿಯಾಗಿದೆ. ವಿಷ್ಣುವರ್ಧನ್ ಅಭಿಮಾನಿಗಳ, ಸಮಸ್ತ ಕನ್ನಡಿಗರ ಸ್ವಾಭಿಮಾನದ ಸ್ಥಳವಲ್ಲ ಎಂಬುದನ್ನು ಸರಕಾರ ಅರಿಯಬೇಕು. ಸರಕಾರ ಮಾಡಿರುವ ಪ್ರಮಾದಕ್ಕೆ ಸಮಸ್ತ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.







