ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ಪ್ರಕರಣ |ನಗರದ ಅವ್ಯವಸ್ಥೆ ಬಗ್ಗೆ ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿ: ಆರ್.ಅಶೋಕ್

ಆರ್.ಅಶೋಕ್ (File Photo: X)
ಬೆಂಗಳೂರು: ‘ನಿನ್ನೆ ರಾತ್ರಿ ಸಂಭವಿಸಿದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ಪ್ರಕರಣ ಬೆಂಗಳೂರು ನಗರದ ಅವ್ಯವಸ್ಥೆ ಬಗ್ಗೆ ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿ’ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಸಲಹೆ ನೀಡಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಗೋಡೆ ಕುಸಿದು ಓರ್ವ ಬಾಲಕಿ ಸಹಿತ ಏಳು ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಇಡೀ ನಗರದ ಜನತೆಯನ್ನ ಬೆಚ್ಚಿ ಬೀಳಿಸಿದೆ. ರಸ್ತೆಗುಂಡಿಗೆ, ವಿದ್ಯುತ್ ತಂತಿಗೆ, ಕುಸಿದ ಗೋಡೆಗೆ ನಾಗರೀಕರು ಸಾವನ್ನಪ್ಪಬೇಕಾದ ದುಸ್ಥಿತಿ ಯಾವ ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಅದರಲ್ಲೂ ಇಡೀ ದೇಶದ ಆರ್ಥಿಕ ಬೆನ್ನೆಲುಬಾಗಿರುವ ನಗರದಲ್ಲಿ ಮೂಲಸೌಕರ್ಯ ಹದಗೆಟ್ಟಿರುವುದು ಆಡಳಿತ ಚುಕ್ಕಾಣಿ ಹಿಡಿದಿರುವ ಸರಕಾರಕ್ಕೆ ತಲೆ ತಗ್ಗಿಸುವಂತಹ ವಿಷಯ’ ಎಂದು ಟೀಕಿಸಿದ್ದಾರೆ.
‘ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲೇ ಮುಂಗಾರು ಪೂರ್ವ ಮಳೆ ಬರುವುದು ವಾಡಿಕೆ. ನಿನ್ನೆ ಬಂದ ಮಳೆ ಆಕಸ್ಮಿಕ, ನಿನ್ನೆ ನಡೆದಿದ್ದು ಪ್ರಕೃತಿಯ ವಿಕೋಪ ಎಂದು ಯಾರಾದರೂ ವಾದಿಸಿದರೆ ಅದು ನಿನ್ನೆ ಜೀವ ಕಳೆದುಕೊಂಡ ದುರ್ದೈವಿಗಳಿಗೆ ಮತ್ತು ಅವರ ಕುಟುಂಬದವರಿಗೆ ಮಾತ್ರ ಮಾಡುವ ದ್ರೋಹವಲ್ಲ, ಬದಲಿಗೆ ತಮ್ಮ ಆತ್ಮಸಾಕ್ಷಿಗೆ ಮಾಡಿಕೊಳ್ಳುವ ಆತ್ಮವಂಚನೆ’ ಎಂದು ಅವರು ವಿಶ್ಲೇಷಿಸಿದ್ದಾರೆ.
‘ವಿಪಕ್ಷ ನಾಯಕನಾಗಿ ನಾನು ಕೇವಲ ರಾಜಕೀಯ ಮಾಡುತ್ತಿದ್ದೇನೆ, ಸಾವಿನಲ್ಲೂ ರಾಜಕಾರಣ ಮಾಡುತ್ತಿದ್ದೇನೆಂದು ಟೀಕೆ ಮಾಡುವವರು ಒಮ್ಮೆ ಯೋಚಿಸಲಿ. ಮುಂಗಾರು ಪೂರ್ವ ಮಳೆ ವಿಷಯ ಬಿಡಿ. ಮುಂಗಾರು ಮಳೆ ಆರಂಭಕ್ಕೆ ಇನ್ನು ನಾಲ್ಕು ವಾರ ಬಾಕಿ ಇದೆ. ಸಿಎಂ, ಬೆಂಗಳೂರು ಉಸ್ತುವಾರಿ ಹೊತ್ತಿರುವ ಡಿಸಿಎಂ, ಮಳೆಗಾಲ ನಿರ್ವಹಣೆ ಬಗ್ಗೆ ಈವರೆಗೂ ಒಂದಾದರೂ ಸಭೆ ನಡೆಸಿದ್ದಾರಾ?’ ಎಂದು ಅವರು ಪ್ರಶ್ನಿಸಿದ್ದಾರೆ.
‘ರಸ್ತೆಗುಂಡಿ ಮುಚ್ಚುವ ಬಗ್ಗೆ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿ ಬಗ್ಗೆ, ರಸ್ತೆಯಲ್ಲಿ ಬಿದ್ದಿರುವ, ನೇತಾಡುತ್ತಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವ ಬಗ್ಗೆ, ತಗ್ಗು ಪ್ರದೇಶಗಳಲ್ಲಿ, ಅಂಡರ್ ಪಾಸ್ಗಳಲ್ಲಿ, ಸೇತುವೆಗಳ ಮೇಲೆ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ ಬಗ್ಗೆ, ರಾಜಕಾಲುವೆಗಳ ನಿರ್ವಹಣೆ ಬಗ್ಗೆ, ಹಳೆಯ ಮರಗಳು, ಜೋತು ಬಿದ್ದಿರುವ ಕೊಂಬೆಗಳನ್ನು ತೆಗೆಸುವ ಬಗ್ಗೆ, ಯಾವುದಾದರೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರಾ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ನಿನ್ನೆಯ ಅನಾಹುತವನ್ನು ತಪ್ಪಿಸಬಹುದಿತ್ತೇನೋ ಅಲ್ಲವೇ?’ ಎಂದು ಅವರು ಕೇಳಿದ್ದಾರೆ.
‘ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಬೆಂಗಳೂರಿನ ಮೂಲಸೌಕರ್ಯವನ್ನು ಸುಧಾರಿಸುವ ಬಗ್ಗೆ ಗಮನಹರಿಸದೇ ಹೋದರೆ ಬೆಂಗಳೂರಿನ ಜನತೆ ಕಾಂಗ್ರೆಸ್ ಅನ್ನು ಎಂದಿಗೂ ಕ್ಷಮಿಸಲಾರರು. ನಿನ್ನೆ ಸಂಭವಿಸಿದ ಅವಘಡವನ್ನ ಎಚ್ಚರಿಕೆಯ ಗಂಟೆಯೆಂದು ಪರಿಗಣಿಸಿ ಈ ಕೂಡಲೇ ಬೆಂಗಳೂರಿನ ಮೂಲಸೌಕರ್ಯ ಸುಧಾರಣೆಗೆ ಒಂದು ವಿಶೇಷ ತಂಡ ರಚನೆ ಮಾಡಬೇಕು. ನಗರದಲ್ಲಿ ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಇದೇ ರೀತಿ ಬೆಂಗಳೂರಿನ ಮೇಲಿನ ನಿರ್ಲಕ್ಷ್ಯವನ್ನು ಮುಂದುವರಿಸಿದರೆ, ಮುಂದಾಗುವ ಎಲ್ಲ ಅನಾಹುತಗಳಿಗೆ, ಹೋಗುವ ಪ್ರತಿ ಜೀವಕ್ಕೂ ಸರಕಾರವೇ ನೇರ ಹೊಣೆ’ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
‘ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ದುರಂತದ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ಸಿಎಂ ಪರಿಹಾರ ನೀಡುವುದರಲ್ಲಿ ತಾರತಮ್ಯ ಎಸಗಿದ್ದಾರೆ. ನಾಡಿನ ಜನತೆಗಾದರೆ ಕಡಿಮೆ ಪರಿಹಾರ ಧನ ನೀಡುತ್ತಾರೆ. ಪಕ್ಕದ ಕೇರಳ ರಾಜ್ಯದವರಿಗಾದರೆ 25 ಲಕ್ಷ ರೂ., 50 ಲಕ್ಷ ರೂ. ನೀಡಲು ತಯಾರಿರುತ್ತಾರೆ. ನೆರೆ ರಾಜ್ಯದ ಸಂತ್ರಸ್ತರಿಗೆ ನೀಡಿದ ಅರ್ಧ ಪರಿಹಾರವನ್ನಾದರೂ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬದವರಿಗೆ ಕಾಂಗ್ರೆಸ್ ಸರಕಾರ ನೀಡಬೇಕು’
-ಆರ್.ಅಶೋಕ್, ವಿಪಕ್ಷ ನಾಯಕ
ನಿನ್ನೆ ರಾತ್ರಿ ಸಂಭವಿಸಿದ ಗೋಡೆ ಕುಸಿತ ಪ್ರಕರಣ ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿ!
— R. Ashoka (@RAshokaBJP) April 30, 2026
ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು ಓರ್ವ ಬಾಲಕಿ ಸೇರಿದಂತೆ 7 ಜನ ದುರ್ಮರಣಕ್ಕೀಡಾಗಿರುವ ಘಟನೆ ಇಡೀ ಬೆಂಗಳೂರು ನಗರದ ಜನತೆಯನ್ನ ಬೆಚ್ಚಿ ಬೀಳಿಸಿದೆ.
ರಸ್ತೆಗುಂಡಿಗೆ, ವಿದ್ಯುತ್ ತಂತಿಗೆ, ಕುಸಿದ ಗೋಡೆಗೆ ನಾಗರೀಕರು… pic.twitter.com/6zFcTrXMs1






