ಬೆಂಗಳೂರು| ಪತ್ನಿಯೊಂದಿಗಿನ ಖಾಸಗಿ ಕ್ಷಣಗಳ ಚಿತ್ರೀಕರಿಸಿದ ಪತಿ: ಸ್ನೇಹಿತರೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒತ್ತಡ; ಪ್ರಕರಣ ದಾಖಲು

ಬೆಂಗಳೂರು: ಖಾಸಗಿ ಕ್ಷಣಗಳನ್ನು ಸೀಕ್ರೆಟ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿ, ಆ ವಿಡಿಯೋಗಳನ್ನು ಇಟ್ಟುಕೊಂಡು ಪತ್ನಿಗೆ ಬೆದರಿಕೆ ಹಾಕಿ, ಆಕೆಯನ್ನು ತನ್ನ ವಿದೇಶಿ ಸ್ನೇಹಿತರೊಂದಿಗೆ ಲೈಂಗಿಕ ಸಂಪರ್ಕ ಇರಿಸಿಕೊಳ್ಳುವಂತೆ ಪೀಡಿಸುತ್ತಿದ್ದ ಪತಿಯೊಬ್ಬನ ವಿರುದ್ಧ ಇಲ್ಲಿನ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿರುವುದಾಗಿ ವರದಿಯಾಗಿದೆ.
ಸಂತ್ರಸ್ಥೆಯು ನೀಡಿದ ದೂರಿನನ್ವಯ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
‘ನನ್ನ ಪತಿ ಮನೆಯ ಬೆಡ್‍ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾ ಅಳವಡಿಸಿ, ನನ್ನ ಮತ್ತು ಅವನ ನಡುವಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿದ್ದಾನೆ. ಈ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ನನ್ನ ಮೇಲೆ ಒತ್ತಡ ಹೇರಿ, ತನ್ನ ವಿದೇಶಿ ಸ್ನೇಹಿತರೊಂದಿಗೆ ಲೈಂಗಿಕ ಸಂಪರ್ಕ ಇರಿಸಿಕೊಳ್ಳುವಂತೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಈ ವಿಡಿಯೋಗಳನ್ನು ತನ್ನ ಸ್ನೇಹಿತರಿಗೆ ಹಂಚಿಕೊಂಡಿದ್ದಾನೆ’ ಎಂದು ಸಂತ್ರಸ್ಥೆಯು ದೂರಿನಲ್ಲಿ ಆರೋಪಿಸಿದ್ದಾರೆ.





