ಝಮೀರ್ ಅಹ್ಮದ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ರಾಜ್ಯಪಾಲರಿಗೆ ಪತ್ರ ಬರೆದ ಲೋಕಾಯುಕ್ತ

ಬೆಂಗಳೂರು : ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಲೋಕಭವನಕ್ಕೆ ಸಾವಿರಾರು ಪುಟಗಳ ದಾಖಲೆಗಳೊಂದಿಗೆ ಲೋಕಾಯುಕ್ತ ಪೊಲೀಸರು ಈ ಮನವಿ ಸಲ್ಲಿಸಿದ್ದಾರೆ. ಝಮೀರ್ ಅವರು ವಾರ್ಷಿಕ ಆದಾಯಕ್ಕಿಂತ ಸುಮಾರು 25 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಗಳಿಸಿರುವುದಕ್ಕೆ ಪುರಾವೆಗಳು ಸಿಕ್ಕಿವೆ ಎನ್ನಲಾಗಿದೆ.
2018ರಲ್ಲಿ ‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ವಂಚನೆ ಹಗರಣಕ್ಕೆ ಸಂಬಂಧಿಸಿ ಅಂದಿನ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಈ.ಡಿ.) ದಾಳಿ ನಡೆಸಿತ್ತು. ಈ ವೇಳೆ ಝಮೀರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಪಾರ ಸಂಪತ್ತು ಸಂಪಾದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಈ.ಡಿ. ಅಧಿಕಾರಿಗಳು ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ತನಿಖೆ ನಡೆಸುವಂತೆ ಶಿಫಾರಸು ಮಾಡಿದ್ದರು. ಎಸಿಬಿ ರದ್ದಾದ ಕಾರಣ ಈ ಪ್ರಕರಣ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆಯಾಗಿತ್ತು.
ಝಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ನಡೆಸಿದ್ದ ದಾಳಿಯಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು, ಝಮೀರ್, ಅವರ ಕುಟುಂಬ ಸದಸ್ಯರು, ಸ್ನೇಹಿತರು ಸೇರಿ ವ್ಯವಹಾರಿಕ ಪಾಲುದಾರರನ್ನು ವಿಚಾರಣೆ ನಡೆಸಿ ತನಿಖೆ ಪೂರ್ಣಗೊಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ನೇತೃತ್ವದ ತಂಡ ನಡೆಸಿತ್ತು. ಈಗ ಮಾಜಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.






