ಭಟ್ಕಳದಲ್ಲಿ ಕೋಮು ಉದ್ವಿಗ್ನತೆ ಬಗ್ಗೆ ವರದಿ ಸತ್ಯಕ್ಕೆ ದೂರ : ಡಿವೈಎಸ್‌ಪಿ ಗಿರೀಶ್

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯಲ್ಲಿ 'ಹೈ ಅಲರ್ಟ್' ಘೋಷಿಸಲಾಗಿದ್ದು, ಭಟ್ಕಳದಲ್ಲಿ ಕೋಮು ಗಲಭೆಯ ಸುಳಿವಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು TV9 ವೆಬ್‌ಸೈಟ್‌ನಲ್ಲಿ ಸುದ್ದಿ ಪ್ರಕಟಗೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ಭಟ್ಕಳ ಉಪವಿಭಾಗದ ಡಿವೈಎಸ್‌ಪಿ ಗಿರೀಶ್ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ʼವಾರ್ತಾಭಾರತಿʼಯೊಂದಿಗೆ ಮಾತನಾಡಿದ ಅವರು, "ಭಟ್ಕಳದಲ್ಲಿ ಕೋಮು ಗಲಭೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗುಪ್ತಚರ ಇಲಾಖೆಯ ನಿರ್ದಿಷ್ಟ ಮಾಹಿತಿ ಬಂದಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ 'ಹೈ ಅಲರ್ಟ್' ಘೋಷಿಸಲಾಗಿದೆ ಎಂಬ ಮಾಹಿತಿಯೂ ಸತ್ಯಕ್ಕೆ ದೂರವಾಗಿದೆ" ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ಹಾಗೂ ನಿರ್ದಿಷ್ಟ ಅವಧಿಗಳಿಗೊಮ್ಮೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೆಲವು ವ್ಯಕ್ತಿಗಳಿಗೆ ಮುನ್ನೆಚ್ಚರಿಕೆ ನೋಟಿಸ್ ನೀಡುವುದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ತಹಶೀಲ್ದಾರ್ ಮಟ್ಟದಲ್ಲಿ ಈ ರೀತಿಯ ನೋಟಿಸ್‌ಗಳನ್ನು ನಿಯಮಿತವಾಗಿ ನೀಡಲಾಗುತ್ತಿದ್ದು, ಅದನ್ನು ಯಾವುದೇ ವಿಶೇಷ ಘಟನೆ ಅಥವಾ ತುರ್ತು ಪರಿಸ್ಥಿತಿಗೆ ಸಂಬಂಧಿಸಿ ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
"ಇದು ಸಂಪೂರ್ಣವಾಗಿ ರೂಢಿಯಲ್ಲಿರುವ ಕಾನೂನುಬದ್ಧ ಕ್ರಮ. ಸಾರ್ವಜನಿಕರು ಆತಂಕ ಪಡುವಂತಹ ಯಾವುದೇ ಬೆಳವಣಿಗೆ ಇಲ್ಲ. ಪರಿಶೀಲಿಸದ ಮಾಹಿತಿಯನ್ನು ಪ್ರಕಟಿಸುವುದರಿಂದ ಜನರಲ್ಲಿ ಅನಗತ್ಯ ಭಯ ಮತ್ತು ಗೊಂದಲ ಉಂಟಾಗುವ ಸಾಧ್ಯತೆ ಇದೆ. ಮಾಧ್ಯಮಗಳು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿ ಜವಾಬ್ದಾರಿಯುತವಾಗಿ ವರದಿ ಮಾಡಬೇಕು" ಎಂದು ಡಿವೈಎಸ್‌ಪಿ ಗಿರೀಶ್ ತಿಳಿಸಿದ್ದಾರೆ.
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳು ಅಥವಾ ದೃಢೀಕರಣವಿಲ್ಲದ ಸುದ್ದಿಗಳನ್ನು ನಂಬದೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಹೊರಬರುವ ಅಧಿಕೃತ ಮಾಹಿತಿಯನ್ನು ಮಾತ್ರ ವಿಶ್ವಾಸಕ್ಕೆ ತೆಗೆದು ಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲೆಯ ಪರಿಸ್ಥಿತಿ ಸಹಜವಾಗಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಎಂದಿನಂತೆ ಮುಂದುವರಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.






