ಬೀದರ್ ನಲ್ಲಿ ನ.14, 15ರಂದು ಏಕತಾ ನಡಿಗೆ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನ.14 ಮತ್ತು 15 ರಂದು ಏಕತಾ ನಡಿಗೆ (ಯುನಿಟಿ ಮಾರ್ಚ್) ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರಕಾರದ ಕ್ರೀಡಾ ಮತ್ತು ಯುವ ಸಬಲೀಕರಣ ಮಂತ್ರಾಲಯದ ಮೇರಾ ಯುವ ಭಾರತ್ ಅವರ ಸಂಯೋಗದಲ್ಲಿ ಈ ಏಕತಾ ನಡಿಗೆ ಹಮ್ಮಿಕೊಳ್ಳಲಾಗಿದೆ. ನ.14ರಂದು ಬೆಳಗ್ಗೆ 8 ಗಂಟೆಗೆ ಭೂಮರೆಡ್ಡಿ ಕಾಲೇಜಿನಿಂದ ಮೈಲೂರ ಕ್ರಾಸ್, ಬೊಮಗೊಂಡೇಶ್ವರ್ ವೃತ್ತ, ಬಸವೇಶ್ವರ್ ವೃತ್ತ, ಭಗತ್ ಸಿಂಗ್ ವೃತ್ತ, ಹರಳಯ್ಯ ವೃತ್ತ ಹಾಗೂ ಗುದುಗೆ ಆಸ್ಪತ್ರೆಯಿಂದ ನೆಹರು ಕ್ರೀಡಾಂಗಣದವರೆಗೆ ಹಾಗೂ ನ.15 ರಂದು ಬರಿದ್ ಶಾಹಿ ಮೈದಾನದಿಂದ ಕೇಂದ್ರ ಬಸ್ ನಿಲ್ದಾಣ, ಮಡಿವಾಳ ವೃತ್ತ, ರೋಟರಿ ವೃತ್ತ, ಬ್ರೀಮ್ಸ್ ಆಸ್ಪತ್ರೆ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಗುದಗೆ ಆಸ್ಪತ್ರೆಯಿಂದ ರಂಗಮಂದಿರದ ವರೆಗೆ ಈ ನಡಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆಯಿಂದ ಕುಡಿಯುವ ನೀರು ಹಾಗೂ ಸ್ವಚ್ಛತೆ ಕೈಗೊಳ್ಳಲಾಗುವುದು. ಪೋಲಿಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದ ಅವರು, ಇದೇ ಸಮಯದಲ್ಲಿ ಈ ನಡಿಗೆಗೆ ಸಂಬಂಧಿಸಿದ ಪೋಸ್ಟರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಹಾಗೂ ಮೇರಾ ಯುವ ಭಾರತ್ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ್ ಗೊರ್ಮೆ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.





