ಹುಮನಾಬಾದ್ | 20 ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ಜಪ್ತಿ: ಓರ್ವನ ಬಂಧನ

ಹುಮನಾಬಾದ್: ಚಿಟಗುಪ್ಪ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 20 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿ, ಓರ್ವನನ್ನು ಬಂಧಿಸಿದ ಘಟನೆ ಗುರುವಾರ ಸಾಯಂಕಾಲ ನಡೆದಿದೆ.
ವಾಹನದಲ್ಲಿದ್ದ ಕಂದಗೋಳ ನಿವಾಸಿಯಾದ ವ್ಯಾಪಾರಿ ಶಂಕರ್ ನಾಗಶೆಟ್ಟಿ ಚಿಟ್ನಳ್ಳಿ (39) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕಿ ನಮ್ರತಾ ಬಾಲಾದೆ ಅವರ ತಂಡ ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಸರ್ಕಾರದಿಂದ ವಿತರಿಸುವ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಲಾಗುತ್ತಿತ್ತು ಎನ್ನುವುದು ಖಚಿತವಾಗಿತ್ತು.
ಚಿಟಗುಪ್ಪ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಬಿಳಿ ಬಣ್ಣದ ಮಹೀಂದ್ರಾ ಬೊಲೆರೋ ಪಿಕಪ್ ವಾಹನವನ್ನು ತಪಾಸಣೆ ಮಾಡಿದಾಗ, 40 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ 20 ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆಯಾಗಿದೆ. ಪ್ರತಿ ಚೀಲದಲ್ಲಿ 50 ಕೆ.ಜಿ ಅಕ್ಕಿ ಇತ್ತು ಎಂದು ತಿಳಿದು ಬಂದಿದೆ.
ವ್ಯಾಪಾರಿ ಶಂಕರ್ ಬಳಿ ಅಕ್ಕಿ ಸಾಗಾಟಕ್ಕೆ ಯಾವುದೇ ಸೂಕ್ತ ದಾಖಲೆಗಳಿರಲಿಲ್ಲ. ಚಿಟಗುಪ್ಪ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸರ್ಕಾರದ ಬಿಪಿಎಲ್ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದು, ಸುಮಾರು 68 ಸಾವಿರ ರೂ. ಅಕ್ಕಿ, ಕೃತ್ಯಕ್ಕೆ ಬಳಸಲಾದ ಸುಮಾರು 2 ಲಕ್ಷ ರೂ. ಬೆಲೆ ಬಾಳುವ ಮಹೀಂದ್ರಾ ಬೊಲೆರೋ ಪಿಕಪ್ ವಾಹನ ಸೇರಿ ಒಟ್ಟು 2 ಲಕ್ಷ 68 ಸಾವಿರ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.






