ಹುಲಸೂರ್ ಪ್ರಜಾಸೇವಾ ಆಂದೋಲನದಲ್ಲಿ 266 ಅರ್ಜಿಗಳ ಸ್ವೀಕಾರ

ಹುಲಸೂರ್ : ಪಟ್ಟಣದ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 266 ಅರ್ಜಿಗಳು ಸ್ವೀಕೃತವಾಗಿವೆ.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಶಿವಾನಂದ್ ಮೇತ್ರೆ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಅಗ್ನಿಶಾಮಕ ಇಲಾಖೆ ಅಧಿಕಾರಿ ಮಚೀಂದ್ರ ಶಿಂದೆ ಮಾತನಾಡಿ, ಬರಗಾಲದ ಸಂದರ್ಭದಲ್ಲಿ ಬೆಂಕಿ ಅವಘಡಗಳ ಸಂಭವ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ತುರ್ತು ಸಂದರ್ಭಗಳಲ್ಲಿ 101 ಅಥವಾ 112 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದರು.
ಪ್ರಜಾಸೇವಾ ಆಂದೋಲನದಲ್ಲಿ ಮಾಶಾಸನ, ಸಂಧ್ಯಾ ಸುರಕ್ಷಾ ಯೋಜನೆ, ಪಡಿತರ ಚೀಟಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳಿಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗಿವೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆರಂಭ, ಮೆಟ್ರಿಕ್ ನಂತರದ ವಸತಿ ನಿಲಯ ಸ್ಥಾಪನೆ, ಸವಿತಾ ಸಮಾಜ ಭವನ ನಿರ್ಮಾಣ ಹಾಗೂ ಗಣೇಶನಗರದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಭಾಗವಹಿಸಬೇಕಿದ್ದರೂ ಕೆಲ ಅಧಿಕಾರಿಗಳು ಗೈರಾಗಿದ್ದರು. ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ. ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಾಗರಾಜ್ ಅದೆಪ್ಪ ಆಗ್ರಹಿಸಿದರು.
ಪ್ರಜಾಸೇವಾ ಆಂದೋಲನದಲ್ಲಿ ಒಟ್ಟು 266 ಅರ್ಜಿಗಳು ಸ್ವೀಕೃತವಾಗಿದ್ದರೂ, ಕಾರ್ಯಕ್ರಮದ ವೇಳೆ ಒಂದೂ ಅರ್ಜಿ ವಿಲೇವಾರಿಯಾಗಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಇಒ ಮಹಾದೇವ್ ಜಮ್ಮು, ಉಪ ತಹಶೀಲ್ದಾರ್ ಸುನಿಲಕುಮಾರ್ ಸಜ್ಜನಶೆಟ್ಟಿ, ಆಹಾರ ಸುರಕ್ಷತಾ ಅಧಿಕಾರಿ ಅಶ್ವಿನಿ ಘಾಳೆ, ಡಾ. ಶಶಿಕಾಂತ್ ಕನ್ನಡೆ, ಮಹೇಶ್ ಪಾಟೀಲ್, ಆಕಾಶ್, ಆರ್.ಡಿ. ಪಾಟೀಲ್, ಸಿದ್ಧವೀರಯ್ಯ ರುದನೂರು, ರೇಣುಕಾ ಗಡ್ಡಿಮನಿ, ವಿಜಯಕುಮಾರ್, ಎಲ್ಲಾರಾಮ್ ಹಾಗೂ ಸಂತೋಷಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.






