ಮುಂಬೈ-ಬೀದರ್, ಲಾತೂರ್ ರೈಲುಗಳಿಗೆ ಹೆಚ್ಚುವರಿ 3 ಬೋಗಿಗಳು ಅಳವಡಿಕೆ

ಸಾಂದರ್ಭಿಕ ಚಿತ್ರ
ಬೀದರ್: ಪ್ರಯಾಣಿಕರ ಅನುಕೂಲಕರ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ಕೇಂದ್ರ ರೈಲ್ವೆ ಇಲಾಖೆ ಸಿಎಸ್ಎಂಟಿ ಮುಂಬೈ-ಲಾತೂರ್ ಹಾಗೂ ಸಿಎಸ್ಎಂಟಿ ಮುಂಬೈ-ಬೀದರ್ ಎಕ್ಸ್ಪ್ರೆಸ್ ರೈಲುಗಳಿಗೆ ಮೂರು ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಿದೆ ಎಂದು ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 25ರಿಂದ ರೈಲು ಸಂಖ್ಯೆ 22107 ಸಿಎಸ್ಎಂಟಿ ಮುಂಬೈ-ಲಾತೂರ್ ಎಕ್ಸ್ಪ್ರೆಸ್ ಹಾಗೂ ಜೂನ್ 26ರಿಂದ ರೈಲು ಸಂಖ್ಯೆ 22108 ಲಾತೂರ್-ಸಿಎಸ್ಎಂಟಿ ಮುಂಬೈ ಎಕ್ಸ್ಪ್ರೆಸ್ ಹೆಚ್ಚುವರಿ ಬೋಗಿಗಳೊಂದಿಗೆ ಸಂಚರಿಸಲಿವೆ. ಅದೇ ರೀತಿ, ಜೂನ್ 26ರಿಂದ ರೈಲು ಸಂಖ್ಯೆ 22143 ಸಿಎಸ್ಎಂಟಿ ಮುಂಬೈ-ಬೀದರ್ ಎಕ್ಸ್ಪ್ರೆಸ್ ಹಾಗೂ ಜೂನ್ 27ರಿಂದ ರೈಲು ಸಂಖ್ಯೆ 22144 ಬೀದರ್-ಸಿಎಸ್ಎಂಟಿ ಮುಂಬೈ ಎಕ್ಸ್ಪ್ರೆಸ್ ಸೇವೆಯಲ್ಲೂ ಹೆಚ್ಚುವರಿ ಬೋಗಿಗಳು ಸೇರ್ಪಡೆಯಾಗಲಿವೆ.
ಈ ರೈಲುಗಳಲ್ಲಿ ಒಟ್ಟು 24 ಐಸಿಎಫ್ ಕೋಚ್ಗಳು ಇರಲಿದ್ದು, ಒಂದು ಪ್ರಥಮ ಎಸಿ, ಮೂರು ಎಸಿ ದ್ವಿತೀಯ ದರ್ಜೆ, ಐದು ಎಸಿ ತೃತೀಯ ದರ್ಜೆ, ಒಂಬತ್ತು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಎರಡು ಗಾರ್ಡ್-ಕಮ್-ಬ್ರೇಕ್ ವ್ಯಾನ್ಗಳು ಒಳಗೊಂಡಿರಲಿವೆ.
ಹೆಚ್ಚುವರಿ ಮೂರು ಬೋಗಿಗಳ ಸೇರ್ಪಡೆಯಿಂದ ಒಟ್ಟು 182 ಹೆಚ್ಚುವರಿ ಆಸನಗಳ ಸೌಲಭ್ಯ ದೊರೆಯಲಿದೆ. ಇದರಲ್ಲಿ ಎಸಿ ದ್ವಿತೀಯ ದರ್ಜೆಯಲ್ಲಿ 46, ಎಸಿ ತೃತೀಯ ದರ್ಜೆಯಲ್ಲಿ 64 ಹಾಗೂ ಸ್ಲೀಪರ್ ಕ್ಲಾಸ್ನಲ್ಲಿ 72 ಹೆಚ್ಚುವರಿ ಆಸನಗಳು ಲಭ್ಯವಾಗಲಿವೆ.
ಈ ಕ್ರಮದಿಂದ ಮುಂಬೈ, ಲಾತೂರ್ ಮತ್ತು ಬೀದರ್ ನಡುವಿನ ಪ್ರಯಾಣಿಕರಿಗೆ ಹೆಚ್ಚಿನ ಆಸನ ಸಾಮರ್ಥ್ಯ, ಉತ್ತಮ ಸೌಲಭ್ಯ ಹಾಗೂ ಆರಾಮದಾಯಕ ಪ್ರಯಾಣದ ಅನುಕೂಲ ದೊರೆಯಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸೋಲಾಪುರ ವಿಭಾಗದ ರೈಲ್ವೆ ಅಧಿಕಾರಿಗಳು, ಪ್ರಯಾಣಿಕರು ಹೊಸದಾಗಿ ಹೆಚ್ಚಿಸಲಾದ ಬೋಗಿಗಳ ಸೌಲಭ್ಯವನ್ನು ಬಳಸಿಕೊಂಡು ಸುಗಮ ಪ್ರಯಾಣದ ಲಾಭ ಪಡೆಯುವಂತೆ ಮನವಿ ಮಾಡಿದ್ದಾರೆ.






