ಮನರೇಗಾ ಕಾರ್ಮಿಕರ ಬಾಕಿ ಕೂಲಿ ಪಾವತಿಗೆ 34.77 ಕೋಟಿ ರೂ. ಮಂಜೂರು : ಸಚಿವ ಈಶ್ವರ್ ಖಂಡ್ರೆ

ಸಚಿವ ಈಶ್ವರ್ ಖಂಡ್ರೆ
ಬೀದರ್: ವಿಬಿ-ಜಿ ರಾಮ್ ಜಿ ಜಾರಿಯಾಗುವ ಮುನ್ನ ಜಾರಿಯಲ್ಲಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿಯಲ್ಲಿ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ ಪಾವತಿಸಬೇಕಿದ್ದ ಬಾಕಿ ಕೂಲಿ ಹಣ ಬಿಡುಗಡೆ ಮಾಡಲು 34.77 ಕೋಟಿ ರೂ. ಮಂಜೂರಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಮನರೇಗಾ ಅಡಿಯಲ್ಲಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಬಾಕಿ ಇರುವ ಕೂಲಿ ಪಾವತಿಸಲು ಹಣ ಬಿಡುಗಡೆ ಮಾಡುವಂತೆ ತಾವು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವರಿಗೆ ಹಲವು ಬಾರಿ ಮನವಿ ಮಾಡಿ ಒತ್ತಾಯಿಸಿದ್ದೆ. ಇದೀಗ ಕೊನೆಯ ಕಂತಿನ ಕೂಲಿ ಪಾವತಿಗಾಗಿ ಒಟ್ಟು 34.77 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿದೆ ಎಂದು ಅವರು ಹೇಳಿದ್ದಾರೆ.
ಈ ಒಟ್ಟು ಮೊತ್ತದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕಾರ್ಮಿಕರ ಕೂಲಿ ಪಾವತಿಗೆ 6.87 ಕೋಟಿ ರೂ., ಪರಿಶಿಷ್ಟ ಪಂಗಡದ ಕಾರ್ಮಿಕರ ಕೂಲಿ ಪಾವತಿಗೆ 5.75 ಕೋಟಿ ರೂ. ಹಾಗೂ ಇತರ ವರ್ಗಗಳ ಕಾರ್ಮಿಕರಿಗೆ 22.15 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಈ ಅನುದಾನವು ಕಾರ್ಮಿಕರ ಬಾಕಿ ವೇತನ ಪಾವತಿಗೆ ನೆರವಾಗಲಿದ್ದು, ನಿಧಿ ವರ್ಗಾವಣೆ ಆದೇಶದ ಆಧಾರದ ಮೇಲೆ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಮನರೇಗಾ ಅಡಿಯಲ್ಲಿ ಗ್ರಾಮಗಳಲ್ಲಿ ಆಸ್ತಿ ಸೃಜನೆಗಾಗಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ 1,570 ಕೋಟಿ ರೂ. ಸಾಮಗ್ರಿ ವೆಚ್ಚ ಬಾಕಿ ಇದೆ. ಈ ಹಣವನ್ನೂ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.






