ಬೀದರ್ | ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಆರೋಪ : ಪ್ರಕರಣ ದಾಖಲು

ಬೀದರ್ : ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಕೆಲಸ ಕೊಡಿಸುವುದಾಗಿ ನಂಬಿಸಿ 6. 65 ಲಕ್ಷ ರೂ. ವಂಚನೆ ಮಾಡಿದ್ದಾನೆ ಎಂದು ಬೀದರ್ ನ ಇಬ್ಬರು ವ್ಯಕ್ತಿಗಳು ಆರೋಪಿಸಿದ್ದು, ಗುರುವಾರ ಪ್ರಕರಣ ದಾಖಲಾಗಿದೆ.
ಬೀದರ್ ನಗರದ ಶಿವನಗರದ ನಿವಾಸಿ ಗಿರೀಶ್ ಕುಲಕರ್ಣಿ ಮತ್ತು ಭಾಲ್ಕಿ ತಾಲ್ಲೂಕಿನ ಗೊರನಾಳ್ ಗ್ರಾಮದ ನಾಗರಾಜ್ ಇವರಿಬ್ಬರು ವಂಚನೆಗೆ ಒಳಗಾದ ವ್ಯಕ್ತಿಗಳಾಗಿದ್ದು, ದೂರು ನೀಡಿದ್ದಾರೆ.
ನಾವು ಬೆಂಗಳೂರು ಮೂಲದವರಾಗಿದ್ದೇವೆ ಎಂದು ಅಮಿತ್ ಕುಮಾರ್ ಅಲಿಯಾಸ್ ವಿನಾಯಕ್ ಎಂಬ ವ್ಯಕ್ತಿ ನಮ್ಮನ್ನು ಸಂಪರ್ಕ ಮಾಡಿ, ಕೆಲಸ ಕೊಡಿಸುವುದಾಗಿ ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಹಾಗೆಯೇ ಆತನ ಸಹಚರೆಯಾದ ಸ್ನೇಹಲತಾ ಎಂಬವರ ಅಕೌಂಟ್ ನಂಬರ್ ಹಾಗೂ ಮೊಬೈಲ್ ನಂಬರ್ ನೀಡಿ ಆನ್ಲೈನ್ ಅಥವಾ ಅಕೌಂಟ್ ಮೂಲಕ ಹಣ ಕಳುಹಿಸಲು ಕೋರಿದ್ದನು. ಗಿರೀಶ್ ಕುಲಕರ್ಣಿ 3 ಲಕ್ಷ 40 ಸಾವಿರ ರೂ. ಹಾಗೂ ನಾಗರಾಜ್ 3 ಲಕ್ಷ 25 ಸಾವಿರ ರೂ. ಹೀಗೆ ಇಬ್ಬರು ಸೇರಿ ಒಟ್ಟು 6 ಲಕ್ಷ 65 ಸಾವಿರ ರೂ. ಪಾವತಿಸಿದ್ದೇವೆ. ಅದಾದ ನಂತರ ನಮಗೆ ಯಾವುದೇ ರೀತಿಯ ಕೆಲಸ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.





