ಮಾಜಿ ಸಚಿವ ಡಾ. ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ

ಮಲ್ಲಿಕಾರ್ಜುನ ಖರ್ಗೆ | Photo Credit : PTI
ಬೀದರ್: "ಹಿರಿಯ ಕಾಂಗ್ರೆಸ್ ನಾಯಕ, ಶತಾಯುಷಿ ಹೋರಾಟಗಾರ ಡಾ. ಭೀಮಣ್ಣ ಖಂಡ್ರೆ ಅವರ ನಿಧನವು ವೈಯಕ್ತಿಕವಾಗಿ ನನಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಪಾರ ನೋವು ತಂದಿದೆ," ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಸಂತಾಪ ಸಂದೇಶದಲ್ಲಿ ಡಾ.ಭೀಮಣ್ಣ ಖಂಡ್ರೆ ಅವರೊಂದಿಗಿನ ದಶಕಗಳ ಕಾಲದ ರಾಜಕೀಯ ಮತ್ತು ವೈಯಕ್ತಿಕ ಒಡನಾಟವನ್ನು ಸ್ಮರಿಸಿದ ಖರ್ಗೆ ಅವರು, ಕಲ್ಯಾಣ ಕರ್ನಾಟಕದ ಭೀಷ್ಮ ಎಂದೇ ಕರೆಯಲ್ಪಡುತ್ತಿದ್ದ ನಾಯಕನಿಗೆ ಭಾವಪೂರ್ಣ ನಮನ ಸಲ್ಲಿಸಿದರು.
ಡಾ. ಭೀಮಣ್ಣ ಖಂಡ್ರೆ ಅವರು ಕೇವಲ ರಾಜಕಾರಣಿಯಾಗಿರಲಿಲ್ಲ, ಅವರು ಶೈಕ್ಷಣಿಕ ತಜ್ಞ ಮತ್ತು ಸಹಕಾರ ಕ್ಷೇತ್ರದ ದಿಗ್ಗಜರಾಗಿದ್ದರು. ಸಚಿವರಾಗಿದ್ದ ಅವಧಿಯಲ್ಲಿ ಅವರು ಕಾರಾಂಜಾ ನೀರಾವರಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಜಿಲ್ಲೆಯ ಕೃಷಿ ಕ್ರಾಂತಿಗೆ ಮುನ್ನುಡಿ ಬರೆದಿದ್ದರು. ಅವರ ದೂರದೃಷ್ಟಿಯಿಂದಾಗಿ ಇಂದು ಸಾವಿರಾರು ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಅವರು ಸಮಾಜದ ಏಳಿಗೆಗಾಗಿ ಕೈಗೊಂಡ ಕಾರ್ಯಗಳನ್ನು ಸ್ಮರಿಸಿದ ಖರ್ಗೆ, ಖಂಡ್ರೆ ಅವರ ನಿಧನದಿಂದ ರಾಜ್ಯವು ಒಬ್ಬ ಶ್ರೇಷ್ಠ ಸಂಘಟನಾ ಚತುರ ಮತ್ತು ಮಾರ್ಗದರ್ಶಕನನ್ನು ಕಳೆದುಕೊಂಡಿದೆ. ಭಗವಂತನು ಅವರ ಕುಟುಂಬ ವರ್ಗಕ್ಕೆ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.







