ಕರ್ತವ್ಯ ಲೋಪ ಆರೋಪ: ಸಂತಪುರ್ ಕಂದಾಯ ನಿರೀಕ್ಷಕರ ಅಮಾನತಿಗೆ ಆಗ್ರಹ

ಔರಾದ್ : ತಾಲೂಕಿನ ಸಂತಪುರ್ ನ ನಾಡ ಕಛೇರಿಯಲ್ಲಿ ಕಂದಾಯ ನೀರಿಕ್ಷಕರಾಗಿರುವ ಜೈ ಭೀಮ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸಂತಪುರ್ ನಾಡಕಚೇರಿ ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರಿಗೆ ಅತ್ಯಂತ ಸಮಸ್ಯೆಯಾಗುತ್ತಿದೆ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಸಾರ್ವಜನಿಕರು ತಹಸೀಲ್ದಾರ್ ಮಹೇಶ್ ಪಾಟೀಲ್ ಅವರಿಗೆ ಶುಕ್ರವಾರ ಸಲ್ಲಿಸಿದ ನೀಡಿದ ಮನವಿಯಲ್ಲಿ, ವಿನಾ ಕಾರಣ ಅರ್ಜಿಗಳನ್ನು ತಿರಸ್ಕರಿಸುವುದು ಮತ್ತು ಅವಧಿ ಮುಗಿಯುವ ವರೆಗೆ ವಿನಾ ಕಾರಣ ಅರ್ಜಿಗಳನ್ನು ವಿಲೆವಾರಿ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ.
ವಂಶಾವಳಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ ಹೀಗೆ ಎಲ್ಲಾ ಅರ್ಜಿಗಳನ್ನು ತಮ್ಮ ಮೇಜಿನ ಮೇಲೆ ಮತ್ತು ತಮ್ಮ ಲಾಗಿನ್ ನಲ್ಲಿ ಇಟ್ಟುಕೊಂಡು ನನ್ನ ಹತ್ತಿರ ನಿಮ್ಮ ಅರ್ಜಿ ದಾಖಲೆಗಳು ಬಂದಿರುವುದಿಲ್ಲ ಎಂದು ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದಾರೆ ಎಂದು ದೂರಲಾಗಿದೆ.
ಆದ್ದರಿಂದ ಕೂಡಲೇ ಇವರನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ 8 ದಿನಗಳ ಒಳಗೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಶಿವಾನಂದ್ ಕೋಟೆ, ಸಂತೋಷ್ ಪಾಟೀಲ್, ಶೀರೊಮಣಿ, ಕಮಲಹಾಸನ್ ಭಾವಿದೋಡ್ಡಿ ಹಾಗೂ ಸಿಮನ್ ಸೂರ್ಯವಂಶಿ ಇದ್ದರು.






