ಕರ್ತವ್ಯಲೋಪ ಆರೋಪ; ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಆರ್. ದೊಡ್ಡೆ ಅಮಾನತು

ಬೀದರ್ : ಕರ್ತವ್ಯಲೋಪ ಎಸಗಿರುವ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಆರ್. ದೊಡ್ಡೆ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ್ ರಾಮಚಂದ್ರಪ್ಪ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಟಿ.ಆರ್. ದೊಡ್ಡೆ ಅವರು 7ನೇ ಪರಿಷ್ಕೃತ ವೇತನ ಬಟವಾಡೆ ಮಾಡಲು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಂದ ಹಣ ತೆಗೆದುಕೊಂಡು ಪರಿಷ್ಕೃತ ವೇತನವನ್ನು ಮಾಡಿದ್ದಾರೆ. ಕಾಲಮಿತಿ ವೇತನ ಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡಲು ಕೂಡ ಶಿಕ್ಷಕರಿಂದ ಹಣ ತೆಗೆದುಕೊಂಡಿದ್ದಾರೆ. ವೈದ್ಯಕೀಯ ರಜೆಯ ಮೇಲೆ ಹೋದ ಶಿಕ್ಷಕರಿಗೆ ದೈಹಿಕ ಸದೃಡ ಪ್ರಮಾಣ ಪತ್ರ ಇಲ್ಲದಿದ್ದರೂ ಕೂಡ ಶಿಕ್ಷಕರಿಗೆ ರಜೆ ಮತ್ತು ಶಿಕ್ಷಕರ ವೇತನ ಬಿಡುಗಡೆ ಮಾಡಿದ್ದಾರೆ. ಶಿಕ್ಷಕರು ಸಮಸ್ಯೆಗಳನ್ನು ಹೇಳಲು ಹೋದರೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಶಿಕ್ಷಕರಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ವರ್ಗಾವಣೆಯಾದ ಸಿಬ್ಬಂದಿಯನ್ನು ನಿಗದಿತ ಸಮಯದಲ್ಲಿ ಬಿಡುಗಡೆಗೊಳಿಸದೇ ಇರುವ ಮತ್ತು ಅನುದಾನಿತ ಶಾಲೆಗಳ ಸಹ ಶಿಕ್ಷಕರ ವೇತನ ತಡೆಹಿಡಿದಿರುವ ದೂರುಗಳ ಬಗ್ಗೆ ಪೂರಕ ದಾಖಲೆಗಳಿವೆ ಎನ್ನಲಾಗಿದೆ.
ಈ ಎಲ್ಲಾ ಕಾರಣಗಳ ಹಿನ್ನಲೆಯಲ್ಲಿ ಟಿ.ಆರ್. ದೊಡ್ಡೆ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.





