ಚುನಾವಣಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಆರೋಪ: ಲಿಂಗಾಯತ ಸಮನ್ವಯ ಸಮಿತಿಯಿಂದ ಆಕ್ಷೇಪಣೆ

ಬೀದರ್ : ಜಿಲ್ಲೆಯ ಎಲ್ಲ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಲ್ಲಿ ಸರಕಾರ ನಿಗದಿಪಡಿಸಿದ್ದ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಕರ್ನಾಟಕ ರಾಜ್ಯ ಸಂಚಾಲಕ ಶ್ರೀಕಾಂತ್ ಸ್ವಾಮಿ ಅವರು ಅಕ್ಷೇಪಣೆ ಸಲ್ಲಿಸಿದ್ದಾರೆ.
ಈ ಕುರಿತು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗೆ ಸಲ್ಲಿಸಿದ ಅಕ್ಷೇಪಣಾ ಪತ್ರದಲ್ಲಿ, ರಾಜ್ಯ ಸರಕಾರ ನಿಗದಿಪಡಿಸಿದ್ದ ಮೀಸಲಾತಿಯಲ್ಲಿ ಬೀದರ್ ಜಿಲ್ಲೆಯ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ನಲ್ಲಿ ನಿಗದಿಪಡಿಸಿದ್ದ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳ ʻAʼ ಮತ್ತು ಹಿಂದುಳಿದ ವರ್ಗಗಳ ʻBʼ ವರ್ಗದವರಿಗೆ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಒಟ್ಟು ಜನಸಂಖ್ಖೆ ಸುಮಾರು ಶೇ.70 ರಷ್ಟಿದೆ. ಅದರಲ್ಲಿ ಪ್ರಮುಖವಾಗಿ ಲಿಂಗಾಯತ, ಮರಾಠ, ಮುಸ್ಲಿಂ, ಕುರುಬ, ವೀರಶೈವ, ಬಣಜಿಗ, ವಾಲ್ಮೀಕಿ, ಕ್ರಿಶ್ಚಿಯನ್, ಹಠಗಾರ, ಮಡಿವಾಳ, ಹಡಪದ, ಘಾನಿಗ, ಹೂಗಾರ, ಕಮ್ಮಾರ, ಬಡಿಗ, ಶೀಲವಂತ, ನಾಯಕ, ಬೌದ್ಧ ಸೇರಿದಂತೆ 156 ಜಾತಿಗಳಿವೆ. ಪ್ರವರ್ಗ ʻAʼ ಅವರಿಗೆ ಸರಕಾರದ ನಿಯಮದಂತೆ ಸುಮಾರು ಶೇ.27ರಷ್ಟು ಸ್ಥಾನ ನೀಡಬೇಕು. ಆದರೆ, 34 ಸ್ಥಾನದಲ್ಲಿ ಕೇವಲ 2 ಸ್ಥಾನ ನೀಡಲಾಗಿದೆ. ಇದು ಕೇವಲ ಶೇ.4ರಷ್ಟು ಮಾತ್ರವಾಗಿದ್ದು, ಇನ್ನೂ 7 ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರವರ್ಗ ʻBʼ ವರ್ಗಕ್ಕೆ ಸರಕಾರ ನಿಗದಿ ಪಡಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯರಲ್ಲಿ ಒಂದು ಸ್ಥಾನ ಕೊಟ್ಟಿಲ್ಲ. ಪ್ರವರ್ಗ ʻBʼ ಶೂನ್ಯವಾಗಿದೆ. ಸರಕಾರದ ನಿಯಮದಂತೆ ಪ್ರವರ್ಗ ʻBʼ ಗೆ ಶೇ.5 ರಷ್ಟು ಅಂದರೆ 2 ಸ್ಥಾನ ನೀಡಬೇಕು. ಜಿಲ್ಲೆಯಲ್ಲಿ ಪ್ರವರ್ಗ ʻBʼ ನಲ್ಲಿ ಪ್ರಬಲ ಸಮಾಜ ಲಿಂಗಾಯತ ಮತ್ತು ಮರಾಠಾ ಸಮಾಜಗಳು ಬರುತ್ತವೆ. ಜನಸಂಖ್ಯೆಯಲ್ಲಿ ಲಿಂಗಾಯತ ಸುಮಾರು ಶೇ.30ರಿಂದ 35 ರಷ್ಟಿದೆ. ಮರಾಠಾ ಸಮಾಜ ಸುಮಾರು ಶೇ.15ರಿಂದ 20 ರಷ್ಟಿದೆ. ಈ ಎರಡು ಸಮಾಜ ಕೃಷಿ ಮತ್ತು ಕೃಷಿ ಕಾರ್ಮಿಕರಾಗಿದ್ದು, ಸುಮಾರು ಶೇ.95ರಷ್ಟು ಜನ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಠ ಪಂಗಡಕ್ಕೆ ಶೇ.3, ಹಿಂದುಳಿದ ವರ್ಗ ʻAʼ ಶೇ. 27% ಹಾಗೂ ಪ್ರವರ್ಗ ʻBʼ ಗೆ ಶೇ. 5 ರಷ್ಟು ಹಂಚಿಕೆ ಮಾಡಬೇಕು. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಡಿತಗೊಳಿಸಿದ್ದು, ಜಿಲ್ಲೆಯಲ್ಲಿರುವ ಸುಮಾರು ಶೇ.70 ರಷ್ಟು ಹಿಂದುಳಿದವರ ಮೇಲೆ ಅನ್ಯಾಯ ಮಾಡಲಾಗಿದೆ. ಅದನ್ನು ಸರಕಾರ ಸರಿಪಡಿಸಿ ಚುನಾವಣೆ ನಡೆಸಬೇಕು. ಒಂದು ವೇಳೆ ಸರಕಾರ ನಿಯಮದಂತೆ ಸರಿಪಡಿಸದಿದ್ದರೆ ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಇಲ್ಲವಾದರೆ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಹೇಳಿದ್ದಾರೆ.






