ಬಂದ್ ಆಗಿದ್ದ ಕೆಮಿಕಲ್ ಫ್ಯಾಕ್ಟರಿಗಳು ಮತ್ತೆ ಕಾರ್ಯಾರಂಭ ಆರೋಪ : ಹುಮನಾಬಾದ್ ಬಂದ್ ಎಚ್ಚರಿಕೆ

ಹುಮನಾಬಾದ್: ಸರ್ಕಾರದಿಂದ ಬೀಗ ಜಡಿಯಲಾಗಿದ್ದ ಐದು ಕೆಮಿಕಲ್ ಫ್ಯಾಕ್ಟರಿಗಳು ಮತ್ತೆ ಕಾರ್ಯಾರಂಭ ಮಾಡಿರುವುದನ್ನು ವಿರೋಧಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ರವಿಸ್ವಾಮಿ ನಿರ್ಣಾ ಆಕ್ರೋಶ ವ್ಯಕ್ತಪಡಿಸಿದ್ದು, ಅಗತ್ಯವಿದ್ದರೆ ಹುಮನಾಬಾದ್ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯದೀಪಾ, ಲಕ್ಷ್ಮೀ ದುರ್ಗಾ, ಎನ್‌ಎಸ್ ಸಿಕ್ಸ್, ಕೆಜಿಎನ್ ಸೇರಿದಂತೆ ಐದು ಕೆಮಿಕಲ್ ಫ್ಯಾಕ್ಟರಿಗಳನ್ನು ಬಂದ್ ಮಾಡಬೇಕು ಎಂದು ಈ ಹಿಂದೆ ಶಾಸಕರು, ಮಾಜಿ ಸಚಿವರು, ಮಾಣಿಕ್ ಪ್ರಭು ದೇವಸ್ಥಾನದ ಪೂಜ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೋರಾಟ ನಡೆಸಿದ್ದರು. ಅದರ ಪರಿಣಾಮ ಸರ್ಕಾರ ಫ್ಯಾಕ್ಟರಿಗಳಿಗೆ ಬೀಗ ಜಡಿಸಿತ್ತು ಎಂದು ಹೇಳಿದರು.
ಆದರೆ ಸರ್ಕಾರದ ಆದೇಶವನ್ನು ಪಾಲಿಸದೇ ನಾಲ್ಕು ಫ್ಯಾಕ್ಟರಿಗಳು ಮತ್ತೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಆರೋಪಿಸಿದರು. ಬೀಗ ಹಾಕಿದ ಬಳಿಕವೂ ಫ್ಯಾಕ್ಟರಿಗಳು ಪುನಃ ಆರಂಭಗೊಂಡಿದ್ದು, ಅಲ್ಲಿ ಕಾರ್ಮಿಕರು ಪ್ರತಿದಿನ ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ ಎಂದು ತಿಳಿಸುತ್ತಿದ್ದಾರೆ ಎಂದು ಹೇಳಿದರು.
ಕಾನೂನಿಗೆ ಗೌರವ ನೀಡಿ ನಾವು ಫ್ಯಾಕ್ಟರಿಗಳ ಒಳಗೆ ಹೋಗಿಲ್ಲ. ಆದರೆ ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಕಾರ್ಮಿಕರೇ ಮಾಹಿತಿ ನೀಡುತ್ತಿದ್ದಾರೆ ಎಂದು ರವಿಸ್ವಾಮಿ ನಿರ್ಣಾ ಆರೋಪಿಸಿದರು.
ಈ ಹಿಂದೆ ಫ್ಯಾಕ್ಟರಿಗಳಿಗೆ ಬೀಗ ಹಾಕಿಸಲು ಹೋರಾಟ ನಡೆಸಿದ್ದೇವೆ. ಈಗಲೂ ಅವುಗಳನ್ನು ಸಂಪೂರ್ಣವಾಗಿ ಸೀಜ್ ಮಾಡದಿದ್ದರೆ ಕನ್ನಡ ಸೇನೆ ಕರ್ನಾಟಕ ಸಂಘಟನೆ ವತಿಯಿಂದ ಹುಮನಾಬಾದ್ ತಾಲೂಕು ಬಂದ್ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆಯ ಮುಖಂಡ ಸುಬಾಷ್ ಕೆನ್ನಾಡೆ ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.






