ನಕಲಿ ವೈದ್ಯರಿಗೆ ಔಷಧ ಸರಬರಾಜು ಆರೋಪ: ಮೆಡಿಕಲ್ ಸ್ಟೋರ್ಸ್ ಗಳ ಪರವಾನಗಿ ಅಮಾನತು

ಸಾಂದರ್ಭಿಕ ಚಿತ್ರ | PC : Image by zinkevych on Magnific
ಬೀದರ್ : ನಕಲಿ ವೈದ್ಯರಿಗೆ ಔಷಧ ಸರಬರಾಜು ಮಾಡಿದ ಮೆಡಿಕಲ್ ಸ್ಟೋರ್ಸ್ಗಳ ಪರವಾನಗಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಬೀದರ್ ಸಹಾಯಕ ಔಷಧ ನಿಯಂತ್ರಕ ಧನಂಜಯ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹುಮನಾಬಾದ್ ನಗರದ ದೇವಿ ಕೃಪಾ ಮೆಡಿಕಲ್, ಸಾಯಿ ಸರ್ಜಿಕಲ್ಸ್, ಆದ್ಯ ಫಾರ್ಮಾ, ಬಸವಕಲ್ಯಾಣದ ವೀರಭದ್ರೇಶ್ವರ್ ಮೆಡಿಕಲ್ ಹಾಗೂ ಜಂಬಗಿಯ ಶ್ರೀನಾಥ್ ಮೆಡಿಕಲ್ ಔಷಧ ಅಂಗಡಿಗಳ ಲೈಸೆನ್ಸ್ಗಳನ್ನು ಅ.26ರಿಂದ ಜಾರಿಗೆ ಬರುವಂತೆ ಹತ್ತು ದಿನಗಳ ವರೆಗೆ ಅಮಾನತುಗೊಳಿಸಲಾಗಿದೆ. ಅದೇ ರೀತಿ, ಭಾಲ್ಕಿ ನಗರದ ಶಿವಾ ಮೆಡಿಕಲ್ ಮತ್ತು ಬಿರಾದಾರ್ ಫಾರ್ಮಾ ಸಂಸ್ಥೆಗಳ ಲೈಸೆನ್ಸ್ಗಳನ್ನು ಐದು ದಿನಗಳವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಪಿಎಂಇ ಜಿಲ್ಲಾ ಮಟ್ಟದ ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪ್ರಾಧಿಕಾರದ ಸಭೆಯಲ್ಲಿ ನಕಲಿ ವೈದ್ಯರ ವಿರುದ್ಧ ದಂಡ ವಿಧಿಸಿ ಕ್ರಮ ಕೈಗೊಂಡ ಬೆನ್ನಲ್ಲೇ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡುತ್ತಿದ್ದ ಔಷಧ ಅಂಗಡಿಗಳನ್ನು ಪತ್ತೆಹಚ್ಚಿ ಈ ಕ್ರಮ ಜರುಗಿಸಲಾಗಿದೆ. ಯಾವುದೇ ಔಷಧ ಅಂಗಡಿಯವರು ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.






